×
Ad

ಭಾರತದಾದ್ಯಂತ ಉಷ್ಣಮಾರುತದ ದಾಳಿ | ವಿವಿಧ ರಾಜ್ಯಗಳಲ್ಲಿ ಉಷ್ಣತೆಯಲ್ಲಿ ಅಗಾಧ ಹೆಚ್ಚಳ

Update: 2025-04-09 20:36 IST

PC : climate.gov

ಹೊಸದಿಲ್ಲಿ: ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳ ಒಟ್ಟು 27 ಹವಾಮಾನ ಕೇಂದ್ರಗಳು 43 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಹೆಚ್ಚಿನ ಉಷ್ಣತೆಯನ್ನು ದಾಖಲಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಮ್‌ಡಿ) ತಿಳಿಸಿದೆ. ಈ ಪೈಕಿ ಕನಿಷ್ಠ 19 ಕೇಂದ್ರಗಳು ಉಷ್ಣ ಅಲೆಯಿಂದ ಕಠಿಣ ಉಷ್ಣ ಅಲೆವರೆಗಿನ ಪರಿಸ್ಥಿತಿಯನ್ನು ದಾಖಲಿಸಿವೆ.

ದಿಲ್ಲಿಯ ಪ್ರಮುಖ ಹವಾಮಾನ ಕೇಂದ್ರ ಸಫ್ದರ್‌ ಜಂಗ್ ವೀಕ್ಷಣಾಲಯ (41 ಡಿಗ್ರಿ ಸೆಲ್ಸಿಯಸ್) ಸೇರಿದಂತೆ ದಿಲ್ಲಿಯ ಕೆಲವು ಹವಾಮಾನ ಕೇಂದ್ರಗಳು ಉಷ್ಣ ಅಲೆ ಪರಿಸ್ಥಿತಿಯನ್ನು ದಾಖಲಿಸಿವೆ.

ರಾಜಸ್ಥಾನದ ಬಾರ್ಮೆರ್ ದೇಶದಲ್ಲೇ ಅತ್ಯಂತ ಬಿಸಿ ಸ್ಥಳವಾಗಿದೆ. ಅಲ್ಲಿ 46.4 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಇದು ಸಾಮಾನ್ಯ ಉಷ್ಣತೆಗಿಂತ 7.6 ಡಿಗ್ರಿ ಅಧಿಕವಾಗಿದೆ.

ರಾಜಸ್ಥಾನದ ಇತರ ಹಲವಾರು ಸ್ಥಳಗಳಲ್ಲೂ ಅಧಿಕ ಉಷ್ಣತೆ ದಾಖಲಾಗಿದೆ. ಜೈಸಲ್ಮೇರ್‌ ನಲ್ಲಿ 45 ಡಿಗ್ರಿ, ಚಿತ್ತೋರ್‌ಗಢದಲ್ಲಿ 44.5 ಡಿಗ್ರಿ, ಬಿಕಾನೆರ್‌ ನಲ್ಲಿ 44.4 ಡಿಗ್ರಿ ಮತ್ತು ಶ್ರೀ ಗಂಗಾನಗರ್‌ ನಲ್ಲಿ 44.2 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಈ ಸ್ಥಳಗಳ ಉಷ್ಣತೆಯು ಸಾಮಾನ್ಯಕಿಂತ 7ರಿಂದ 9 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ.

ಗುಜರಾತ್‌ ನಲ್ಲಿ, ಸುರೇಂದ್ರನಗರ್‌ ನಲ್ಲಿ 44.8 ಡಿಗ್ರಿ, ರಾಜ್‌ಕೋಟ್‌ ನಲ್ಲಿ 44 ಡಿಗ್ರಿ, ಅಮ್ರೇಲಿಯಲ್ಲಿ 43.8 ಡಿಗ್ರಿ ಹಾಗೂ ಮಹುವ ಮತ್ತು ಕಾಂಡ್ಲಾದಲ್ಲಿ ತಲಾ 43.4 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಮಹುವದ ಉಷ್ಣತೆಯು ಸಾಮಾನ್ಯಕ್ಕಿಂತ 8.3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಮಹಾರಾಷ್ಟ್ರದಲ್ಲಿ, ಅಕೋಲದಲ್ಲಿ 44.1 ಡಿಗ್ರಿ, ನಂದರ್ಬಾರ್‌ನಲ್ಲಿ 43.5 ಡಿಗ್ರಿ, ಜಲಗಾಂವ್‌ನಲ್ಲಿ 43.3 ಡಿಗ್ರಿ ಮತ್ತು ಅಮ್ರಾವತಿಯಲ್ಲಿ 43 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ.

ಮಧ್ಯಪ್ರದೇಶದ ಗುನ ಮತ್ತು ರತ್ಲಮ್‌ನಲ್ಲಿ ಕ್ರಮವಾಗಿ 43.4 ಡಿಗ್ರಿ ಮತ್ತು 43.2 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ.

ವಾಯುವ್ಯ ಭಾರತದಲ್ಲಿ ಕಾಣಿಸಿಕೊಂಡಿರುವ ಉಷ್ಣ ಮಾರುತವು ಎಪ್ರಿಲ್ 10ರ ಬಳಿಕ ಶಮನಗೊಳ್ಳುವ ನಿರೀಕ್ಷೆಯಿದೆ. ಗುಜರಾತ್ ಮತ್ತು ಮಧ್ಯಪ್ರದೇಶದ ಉಷ್ಣತೆಯು ಎಪ್ರಿಲ್ 11ರಿಂದ ಕಡಿಮೆಗೊಳ್ಳುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News