ಉತ್ತರಾಖಂಡದಲ್ಲಿ ಭಾರೀ ಮಳೆ | 12 ಮಂದಿ ಮೃತ್ಯು, ಹಲವರಿಗೆ ಗಾಯ
ಸಾಂದರ್ಭಿಕ ಚಿತ್ರ
ಉತ್ತರಾಖಂಡ : ಉತ್ತರಾಖಂಡದ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಹಾಗೂ 6 ಮಂದಿ ಗಾಯಗೊಂಡಿದ್ದಾರೆ.
ಭಾರೀ ಮಳೆಯಿಂದಾಗಿ ಮನೆ ಕುಸಿದ ಹಲವು ಘಟನೆಗಳು ಸಂಭವಿಸಿವೆ. ನದಿಗಳಲ್ಲಿ ನೆರೆ ಉಂಟಾಗಿದೆ ಹಾಗೂ ಹಲವು ನದಿಗಳಲ್ಲಿ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ
ಈ ನಡುವೆ ಕೇದಾರ್‌ನಾಥ್‌ನಲ್ಲಿ ಬುಧವಾರ ಮೇಘ ಸ್ಫೋಟ ಸಂಭವಿಸಿರುವುದು ವರದಿಯಾಗಿದೆ. ಇದರಿಂದ ಮಂದಾಕಿನಿ ನದಿಯಲ್ಲಿ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಹರಿದ್ವಾರ ಜಿಲ್ಲೆಯಲ್ಲಿ 6 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ತೆಹ್ರಿಯಲ್ಲಿ ಮೂವರು, ಡೆಹ್ರಾಡೂನ್‌ನಲ್ಲಿ ಇಬ್ಬರು ಹಾಗೂ ಚಮೋಲಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಹಲ್ದ್ವಾನಿ ಹಾಗೂ ಚಮೋಲಿಯಲ್ಲಿ ತಲಾ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಡೆಹ್ರಾಡೂನ್‌ನ ವಿಪತ್ತು ನಿರ್ವಹಣಾ ಕೊಠಡಿ ತಿಳಿಸಿದೆ.
ರಾಯ್‌ಪುರದ ಆಯುಧ ಕಾರ್ಖಾನೆಯ ಸಮೀಪದ ಕೆಲವು ಋತುಗಳಲ್ಲಿ ಮಾತ್ರ ತುಂಬಿ ಹಿರಿಯ ಕಾಲುವೆಯ ನೀರಿನಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್ ಸಿಂಗ್ ತಿಳಿಸಿದ್ದಾರೆ.
ಈ ಪ್ರಾಕೃತಿಕ ವಿಪತ್ತಿನಿಂದಾಗಿ ಕೇದಾರನಾಥದಲ್ಲಿ ಕನಿಷ್ಠ 150ರಿಂದ 200 ಯಾತ್ರಿಗಳು ಸಿಲುಕಿರುವ ಸಾಧ್ಯತೆ ಇದೆ. ಈಗಾಗಲೇ ಕೇದಾರನಾಥಕ್ಕೆ ತೆರಳುತ್ತಿರುವವರು ಸುರಕ್ಷಿತ ಪ್ರದೇಶಗಳಲ್ಲಿ ತಂಗುವಂತೆ ಸಲಹೆ ನೀಡಲಾಗಿದೆ.
ಇದಲ್ಲದೆ ಮೇಘ ಸ್ಫೋಟದಿಂದ ಕೇದಾರನಾಥ್ ಕಾಲು ದಾರಿಯಲ್ಲಿರುವ ಭೀಮ್ ಬಾಲಿಯಲ್ಲಿ ಭೂಕುಸಿತ ಸಂಭವಿಸಿದೆ ಹಾಗೂ ಕಾಲುದಾರಿಗೆ ವಿಪರೀತ ಹಾನಿ ಉಂಟಾಗಿದೆ. ಈ ಕಾಲು ದಾರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಪೊಲೀಸರು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಆಗ್ರಹಿಸಲಾಗಿದೆ