ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಯೋಜನೆ | 209 ಮ್ಯಾಂಗ್ರೂವ್ ಮರಗಳನ್ನು ಕಡಿಯಲು ಅದಾನಿ ಸಮೂಹಕ್ಕೆ ಹೈಕೋರ್ಟ್ ಅನುಮತಿ
ಸಾಂದರ್ಭಿಕ ಚಿತ್ರ | PC : freepik.com
ಮುಂಬೈ: ನಗರ ಹಾಗೂ ಉಪ ನಗರಗಳಲ್ಲಿ ಪ್ರಸ್ತಾವಿತ ವಿದ್ಯುತ್ ಪೂರೈಕೆಯನ್ನು ಹೆಚ್ಚಿಸಲು ಅತ್ಯಧಿಕ ವೋಲ್ಟೇಜ್‌ನ ಪ್ರಸರಣ ಮಾರ್ಗ ನಿರ್ಮಾಣ ಮಾಡಲು 209 ಮ್ಯಾಂಗ್ರೂವ್ ಮರಗಳನ್ನು ಕಡಿಯಲು ಬಾಂಬೆ ಉಚ್ಚ ನ್ಯಾಯಾಲಯ ಅದಾನಿ ಸಮೂಹಕ್ಕೆ ಅನುಮತಿ ನೀಡಿದೆ.
ಇದು ಸಾರ್ವಜನಿಕ ಮಹತ್ವ ಇರುವ ಯೋಜನೆ ಎಂದು ಬಾಂಬೆ ಉಚ್ಚ ನ್ಯಾಯಾಲಯ ಹೇಳಿದೆ.
ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಯೋಜನೆಯು ಮುಂಬೈಗೆ ನಿರ್ಣಾಯಕವಾಗಿದೆ. ಯಾಕೆಂದರೆ, ಮುಂಬೈಗೆ ಮತ್ತಷ್ಟು ವಿದ್ಯುತ್ ಅನ್ನು ಪೂರೈಕೆ ಮಾಡಲು ಈಗಿರುವ ಪ್ರಸರಣ ಕಾರಿಡಾರ್‌ನ ಸಾಮರ್ಥ್ಯ ಸಾಕಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ವಿಭಾಗೀಯ ಪೀಠ ಫೆಬ್ರವರಿ 6ರ ಆದೇಶದಲ್ಲಿ ಹೇಳಿದೆ.
ತನ್ನ ಎರಡು ಪ್ರಸರಣ ಉಪ ಕೇಂದ್ರಗಳ ನಡುವೆ ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್ (ಎಚ್‌ವಿಡಿಸಿ) ಸಂಪರ್ಕವನ್ನು ಆರಂಭಿಸಲು ವಸಾಯಿ ಕ್ರೀಕ್ ಸಮೀಪ 209 ಮ್ಯಾಂಗ್ರೊ ಮರಗಳನ್ನು ಕಡಿಯಲು ಅನುಮತಿ ಕೋರಿ ಅದಾನಿ ಇಲೆಕ್ಟ್ರಿಸಿಟಿ ಮುಂಬೈ ಇನ್‌ಫ್ರಾ ಲಿಮಿಟೆಡ್ ಸಲ್ಲಿಸಿದ ಅಜಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು.
ಈ ಯೋಜನೆ 80 ಕಿ.ಮೀ. ಮಾರ್ಗವನ್ನು ಒಳಗೊಂಡಿದೆ. ಇದರಲ್ಲಿ 30 ಕಿ.ಮೀ. ಓವರ್ ಹೆಡ್ ಪ್ರಸರಣ ಮಾರ್ಗಗಳು ಹಾಗೂ ಉಳಿದ 50 ಕಿ.ಮೀ. ಮ್ಯಾಂಗ್ರೂ ಪ್ರದೇಶದ ಭೂಗತ ಕೇಬಲ್‌ಗಳನ್ನು ಒಳಗೊಂಡಿರಲಿದೆ. ಈ ಎಚ್‌ಡಿವಿಸಿ ಮಾರ್ಗಗಳು ಮುಂಬೈ, ಠಾಣೆ ಹಾಗೂ ಪಾಲ್ಘಾರ್ ಜಿಲ್ಲೆಗಳಲ್ಲಿ ಹಾದು ಹೋಗಲಿವೆ.
ದೂರುದಾರ ಕಂಪೆನಿಯ ಪ್ರಕಾರ ಕೇವಲ ಒಂದು ಕಿ.ಮೀ. ಎಚ್‌ವಿಡಿಸಿ ಮಾತ್ರ ಮ್ಯಾಂಗ್ರೂ ಪ್ರದೇಶದ ಮೂಲಕ ಹಾದು ಹೋಗಲಿದೆ. ಸುಸ್ಥಿರ ಅಭಿವೃದ್ಧಿಯ ಅಗತ್ಯ ಹಾಗೂ ಪರಿಸರವನ್ನು ಕಾಪಾಡಿಕೊಳ್ಳುವ ಅವಶ್ಯಕತೆಯ ನಡುವೆ ಸಮತೋಲವನ್ನು ಕಾಪಾಡಿಕೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಎಚ್‌ಡಿವಿಸಿ ಯೋಜನೆ ಮುಂಬೈ ಹಾಗೂ ಉಪನಗರಗಳಿಗೆ ಹೆಚ್ಚುವರಿ ವಿದ್ಯುತ್ ಪೂರೈಕೆಗೆ ಅನುವು ಮಾಡಿಕೊಡಲಿದೆ. ಅಲ್ಲದೆ, ನಗರದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಈಡೇರಿಸಲಿದೆ ಎಂದು ನ್ಯಾಯಾಲಯ ಹೇಳಿದೆ.