ಪರ್ವತಗಳ ನಡುವೆ ಕಳೆದು ಹೋಗಿ, 10 ದಿನಗಳ ಕಾಲ ಟೂತ್ ಪೇಸ್ಟ್ ಸೇವಿಸಿ ಬದುಕುಳಿದ ಚಾರಣಿಗ!
ಸಾಂದರ್ಭಿಕ ಚಿತ್ರ | PC : freepik.com
ಬೀಜಿಂಗ್: ಪರ್ವತಗಳ ಚಾರಣ ಅತ್ಯಂತ ಅಪಾಯಕಾರಿ ಸಾಹಸಗಳಲ್ಲೊಂದು. ಹೀಗಿದ್ದೂ, ವಿಶ್ವದಾದ್ಯಂತ ಪರ್ವತ ಚಾರಣಕ್ಕೆ ಮುಗಿ ಬೀಳುವ ಸಾಹಸಿಗರ ದೊಡ್ಡ ದಂಡೇ ಇದೆ. ಇಂತಹ ಸಾಹಸಿ ಚಾರಣಿಗನೊಬ್ಬ ಪರ್ವತಗಳ ನಡುವೆ ಕಳೆದು ಹೋಗಿ, 10 ದಿನಗಳ ಕಾಲ ತನ್ನ ಬಳಿ ಇದ್ದ ಟೂತ್ ಪೇಸ್ಟ್ ಸೇವಿಸಿ ಬದುಕುಳಿದಿರುವ ಘಟನೆ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ನಡೆದಿದೆ ಎಂದು South China Morning Post ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫೆಬ್ರವರಿ 8ರಂದು ಚಾರಣ ಪ್ರಾರಂಭಿಸಿದ್ದ 18 ವರ್ಷದ ಸನ್ ಲಿಯಾಂಗ್ ಎಂಬ ಯುವಕ, ಸರಾಸರಿ 2,500 ಮೀಟರ್ ಎತ್ತರವಿರುವ ಕ್ವಿನ್ ಲಿಂಗ್ ಪರ್ವತ ಶ್ರೇಣಿಯತ್ತ ಸಾಗಿದ್ದ. ಎರಡು ದಿನಗಳ ಚಾರಣದ ನಂತರ, ತನ್ನ ಮೊಬೈಲ್ ಫೋನ್ ನ ಚಾರ್ಜಿಂಗ್ ಖಾಲಿಯಾಗಿದ್ದರಿಂದ, ಆತ ತನ್ನ ಕುಟುಂಬದ ಸಂಪರ್ಕ ಕಡಿದುಕೊಂಡಿದ್ದ. ಇದರಿಂದ ಏಕಾಂಗಿಯಾಗಿದ್ದ ಹಾಗೂ ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದ ಸನ್, ತೊರೆಯೊಂದರ ಮೂಲಕ ಪರ್ವತ ಶ್ರೇಣಿಯಿಂದ ಕೆಳಮುಖವಾಗಿ ಸಾಗುವಾಗ, ಅದರಲ್ಲಿ ಹಲವು ಬಾರಿ ಜಾರಿ ಬಿದ್ದಿದ್ದಾನೆ. ಇದರಿಂದ ಆತನ ಬಲಗೈ ಮೂಳೆ ಮುರಿತಕ್ಕೊಳಗಾಗಿದೆ.
ಆಹಾರವಿಲ್ಲದೆ ತೀವ್ರ ಹಸಿವಿಗೊಳಗಾಗಿದ್ದ ಸನ್, ನದಿಯ ನೀರು, ಕರಗಿರುವ ಮಂಜು ಹಾಗೂ ಟೂತ್ ಪೇಸ್ಟ್ ಅನ್ನೂ ಸೇವಿಸಿ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದಾನೆ. ತಣ್ಣನೆಯ ಗಾಳಿಯಿಂದ ರಕ್ಷಿಸಿಕೊಳ್ಳಲು ಆತ ದೊಡ್ಡ ಬಂಡೆಯ ಕೆಳಗೆ ರಕ್ಷಣೆ ಪಡೆದಿದ್ದಾನೆ ಹಾಗೂ ಒಣಗಿದ ಹುಲ್ಲು ಹಾಗೂ ಎಲೆಗಳನ್ನು ಬಳಸಿಕೊಂಡು ತಾತ್ಕಾಲಿಕವಾಗಿ ರಕ್ಷಣೆ ಪಡೆದಿದ್ದಾನೆ.
ಸನ್ ಕುಟುಂಬದ ಸದಸ್ಯರು ಸ್ಥಳೀಯ ಶೋಧ ಮತ್ತು ರಕ್ಷಣಾ ತಂಡವನ್ನು ಸಂಪರ್ಕಿಸಿದ ನಂತರ, ಆತನ ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಫೆಬ್ರವರಿ 17ರಂದು ಬೆಂಕಿ ಹೊತ್ತಿಸಿದ ವೇಳೆ ಸನ್ ಮೂಗಿಗೆ ಹೊಗೆಯ ವಾಸನೆ ಬಡಿದಿದ್ದು, ಕೂಡಲೇ ಆತ ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಆ ಮೂಲಕ ರಕ್ಷಣಾ ಸಿಬ್ಬಂದಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ.
“ಈ ಘಟನೆಯ ನಂತರ ನನಗೆ ಭಯವಾಗುತ್ತಿದೆ. ಈ ಪ್ರದೇಶವು ಚಾರಣ ಮಾಡಲು ಯೋಗ್ಯವೇ ಅಲ್ಲ. ಗಾಳಿ ಎಷ್ಟು ಜೋರಾಗಿತ್ತೆಂದರೆ, ನೆರವಿಗೆ ಎರಡು ಆಲ್ಪೆನ್ ಸ್ಟಾಕ್ ಇದ್ದರೂ, ನನಗೆ ಒಂದು ಹೆಜ್ಜೆ ಇಡಲೂ ಸಾಧ್ಯವಾಗುತ್ತಿರಲಿಲ್ಲ. ಮಂಜು ಎಷ್ಟು ಬಿರುಸಾಗಿತ್ತೆಂದರೆ, ನನಗೆ ನನ್ನ ಕಣ್ಣುಗಳನ್ನು ತೆರೆಯುವುದೇ ಅಸಾಧ್ಯವಾಗಿತ್ತು” ಎಂದು ತಾನು ಪಾರಾಗಿ ಬಂದ ನಂತರ ಸನ್ ವಿವರಿಸಿದ್ದಾನೆ.
“ಕ್ಲುಪ್ತವಾಗಿ ಹೇಳುವುದಾದರೆ, ಈ ಮಾರ್ಗ ಚಾರಣ ಮಾಡಲು ತುಂಬಾ ಕ್ಲಿಷ್ಟಕರ. ಇಲ್ಲಿನ ಹವಾಮಾನ ದಿಢೀರೆಂದು ಬದಲಾಗುತ್ತದೆ” ಎಂದೂ ಆತ ಹೇಳಿದ್ದಾನೆ.
ಅವೊ-ತಾಯಿ ಪರ್ವತ ಶ್ರೇಣಿಯಲ್ಲಿ ಚಾರಣ ಮಾಡಲು ಯೋಜಿಸುತ್ತಿರುವ ಇತರ ಚಾರಣಿಗರಿಗೆ ಆ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದು ಎಚ್ಚರಿಸಿರುವ ಸನ್, “ಜೀವ ಅಮೂಲ್ಯ” ಎಂದು ಕಿವಿಮಾತು ಹೇಳಿದ್ದಾನೆ.
ಗಮನಾರ್ಹ ಸಂಗತಿಯೆಂದರೆ, 30 ಸದಸ್ಯರು ಭಾಗವಹಿಸಿದ್ದ ಈ ರಕ್ಷಣಾ ಕಾರ್ಯಾಚರಣೆಗೆ ಸನ್ ಕುಟುಂಬವು 9.5 ಲಕ್ಷ ರೂ. (80,000 ಯುವಾನ್) ಗೂ ಹೆಚ್ಚು ಶುಲ್ಕ ಪಾವತಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಕ್ಷಣಾ ತಂಡದ ಸದಸ್ಯರೊಬ್ಬರು, “ಉತ್ಸಾಹಿ ಚಾರಣಿಗರನ್ನು ಹಿಮ್ಮೆಟ್ಟಿಸಲು ನಾವು ಶುಲ್ಕವನ್ನು ಜಾರಿಗೊಳಿಸಿದ್ದೇವೆ. ಈ ಮಾರ್ಗದಲ್ಲಿ ಚಾರಣಕ್ಕೆ ತೆರಳುವುದರಿಂದ ಕರಡಿಗಳು, ಚಿಗರೆಗಳು, ಹಂದಿಗಳಂಥ ಅಪಾಯಕಾರಿ ವನ್ಯಜೀವಿಗಳ ದಾಳಿಗೆ ಗುರಿಯಾಗಬೇಕಾಗುತ್ತದೆ ಎಂದು ನಾವು ಸಾರ್ವಜನಿಕರಿಗೆ ಎಚ್ಚರಿಸಲು ಬಯಸುತ್ತೇವೆ. ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ನಮ್ಮ ತಂಡದ ಕೆಲವು ರಕ್ಷಣಾ ಸಿಬ್ಬಂದಿಗಳಿಗೆ ಗಾಯಗಳಾಗಿವೆ” ಎಂದು ಹೇಳಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಈ ಕಡಿದಾದ ಪರ್ವತ ಶ್ರೇಣಿಯಲ್ಲಿ ಚಾರಣಕ್ಕೆ ತೆರಳಿದ್ದ 50ಕ್ಕೂ ಹೆಚ್ಚು ಚಾರಣಿಗರು ನಾಪತ್ತೆಯಾಗಿರುವುದು, ಮೃತಪಟ್ಟಿರುವುದಾಗಿ ವರದಿಯಾಗಿದೆ.