ಹಿಮಾಚಲ ಪ್ರದೇಶದ ಮಂಡಿಯಲ್ಲಿ ಭಾರೀ ಪ್ರವಾಹ | ಓರ್ವ ಮೃತ್ಯು, 18 ಮಂದಿ ನಾಪತ್ತೆ
PC : PTI
ಚಂಡಿಗಡ: ಮಂಗಳವಾರ ಸಂಭವಿಸಿದ ಹಲವು ಮೇಘ ಸ್ಫೋಟಗಳಿಂದ ಉಂಟಾದ ದಿಢೀರ್ ಪ್ರವಾಹದಿಂದಾಗಿ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಹಾಗೂ 18 ಮಂದಿ ನಾಪತ್ತೆಯಾಗಿದ್ದಾರೆ.
ಕಿರಾತ್ ಪುರ-ಮನಾಲಿ ಹೆದ್ದಾರಿಯ ಮಂಡಿ ಹಾಗೂ ಕುಲ್ಲು ನಡುವೆ ಹಲವು ಕಡೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ವಾಹನ ಸವಾರರು ರಾತ್ರಿಯಿಡೀ ರಸ್ತೆ ಸುರಂಗಗಳಲ್ಲಿ ಸಿಲುಕಿಕೊಂಡರು.
ಮಂಡಿ ಜಿಲ್ಲೆಯ ಕನಿಷ್ಠ 4 ಸ್ಥಳಗಳಲ್ಲಿ ಮೇಘ ಸ್ಪೋಟ ಸಂಭವಿಸಿದೆ. ಇದರಿಂದ ಉಂಟಾದ ದಿಢೀರ್ ಪ್ರವಾಹದಿಂದ ಹಲವು ಮನೆ, ವಾಹನ ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ 12 ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ 16 ಮಂದಿಯನ್ನು ರಕ್ಷಿಸಲಾಗಿದೆ. ರಿಕಿ ಗ್ರಾಮದಲ್ಲಿ ಒಂದೇ ಕುಟುಂಬದ 7 ಮಂದಿ ಸದಸ್ಯರನ್ನು ಕೂಡ ರಕ್ಷಿಸಲಾಗಿದೆ. ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಬಿಯಾಸ್ ನದಿಯ ಉಪ ನದಿಯ ಪ್ರವಾಹದಿಂದ ಜಯುನಿ ಖಾಡ್ ನಲ್ಲಿ ಎರಡು ಮನೆಗಳು ಕೊಚ್ಚಿಕೊಂಡು ಹೋಗಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಧರ್ಮಪುರ ಉಪವಿಭಾಗದ ಸ್ಯಾಥಿ ಗ್ರಾಮದಲ್ಲಿ ಹಲವು ಮನೆಗಳು ಹಾಗೂ ದನದ ಕೊಟ್ಟಿಗೆಗಳಿಗೆ ಹಾನಿ ಉಂಟಾಗಿವೆ ಅಥವಾ ಕೊಚ್ಚಿಕೊಂಡು ಹೋಗಿವೆ. ಈ ಪ್ರದೇಶದಲ್ಲಿ ಇದುವರೆಗೆ ಯಾವುದೇ ಸಾವು ನೋವುಗಳಾದ ಬಗ್ಗೆ ವರದಿಯಾಗಿಲ್ಲ. ಮಂಡಿಯ ಜೈಲು ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಹಲವು ವಾಹನಗಳು ಭೂಕುಸಿತದಿದಾಗಿ ಹೂತು ಹೋಗಿವೆ.
ಪಂಡೋಹ ಅಣೆಕಟ್ಟಿನಿಂದ ನಿಯಂತ್ರಿತವಾಗಿ ನೀರು ಬಿಡುಗಡೆ ಮಾಡಿರುವುದರಿಂದ ಬಿಯಾಸ್ ನದಿಯಲ್ಲಿ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಂಡೋಹ ಮಾರುಕಟ್ಟೆಯನ್ನು ಮಧ್ಯರಾತ್ರಿ ಸ್ಥಳಾಂತರಿಸಲಾಯಿತು.
ಅಣೆಕಟ್ಟಿನ ಗೇಟು ತೆರೆದಿರುವುದರಿಂದ ಬಿಯಾಸ್ ನದಿಯಲ್ಲಿ ಇದ್ದಕ್ಕಿದ್ದಂತೆ ನೀರು ಏರಿಕೆಯಾದ ಬಳಿಕ ರಘುನಾಥ್ ಕಾ ಪಂಧರ್ನಿಂದ 14 ಮಂದಿಯನ್ನು ತೆರವುಗೊಳಿಸಲಾಗಿದೆ ಹಾಗೂ ಪುರಾನಿ ಮಂಡಿಯಿಂದ 11 ಮಂದಿಯನ್ನು ರಕ್ಷಿಸಲಾಗಿದೆ.