ಹಿಮಾಚಲ ಪ್ರದೇಶ: ದಿಢೀರ್ ಪ್ರವಾಹದಲ್ಲಿ ಕೊಚ್ಚಿ ಹೋದ ಅಂಗಡಿಗಳು, 350ಕ್ಕೂ ಹೆಚ್ಚು ರಸ್ತೆಗಳು ಬಂದ್
PC: ANI
ಶಿಮ್ಲಾ,ಆ.29: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಕಾನೋನ್ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಉಂಟಾದ ದಿಢೀರ್ ಪ್ರವಾಹದಲ್ಲಿ ಒಂದು ಸೇತುವೆ ಮತ್ತು ಮೂರು ಅಂಗಡಿಗಳು ಕೊಚ್ಚಿಕೊಂಡು ಹೋಗಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭೂಕುಸಿತಗಳು ಸಂಭವಿಸಿದ್ದು,ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಕುಲ್ಲು ಮತ್ತು ಬಂಜಾರ್ ಉಪವಿಭಾಗಗಳಲ್ಲಿ ಮಂಗಳವಾರ ಶಾಲಾ ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಘೋಷಿಸಿತ್ತು.
ಶಿಮ್ಲಾ ನಗರದ ರಾಮಚಂದ್ರ ಚೌಕ್ ಬಳಿ ಸೋಮವಾರ ತಡರಾತ್ರಿ ಭಾರೀ ಭೂಕುಸಿತ ಸಂಭವಿಸಿದ್ದು,ಸುಮಾರು 40 ಜನರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಯಿತು. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ,ಕಟ್ಟಡದ ಛಾವಣಿಯೊಂದು ಭಾಗಶಃ ಹಾನಿಗೀಡಾಗಿದೆ. ಛೋಟಾ ಶಿಮ್ಲಾ ಪ್ರದೇಶದಲ್ಲಿ ಮರಗಳು ಉರುಳಿವೆ.
ಕುಲ್ಲು ಮತ್ತು ಬಂಜಾರ್ ಪ್ರದೇಶಗಳಲ್ಲಿ ಮೇಘಸ್ಫೋಟಗಳು,ದಿಢೀರ್ ಪ್ರವಾಹಗಳು ಮತ್ತು ಭೂಕುಸಿತಗಳು ವರದಿಯಾಗಿವೆ. ಇದರಿಂದಾಗಿ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು,ಕಾಲು ಸೇತುವೆಗಳು ಕೊಚ್ಚಿಕೊಂಡು ಹೋಗಿವೆ.
ಜೂನ್ 20ರಂದು ರಾಜ್ಯದಲ್ಲಿ ಮುಂಗಾರು ಮಳೆ ಆರಂಭಗೊಂಡಾಗಿನಿಂದ ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಿಂದಾಗಿ 2,194 ಕೋ.ರೂ.ಗಳ ನಷ್ಟವುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ರಾಜ್ಯದಲ್ಲಿ ಈವರೆಗೆ 74 ದಿಢೀರ್ ಪ್ರವಾಹಗಳು,36 ಮೇಘಸ್ಫೋಟಗಳು ಮತ್ತು 70 ಭಾರೀ ಭೂಕುಸಿತಗಳು ಸಂಭವಿಸಿವೆ. 140 ಜನರು ಮೃತಪಟ್ಟಿದ್ದು,37 ಜನರು ಈಗಲೂ ನಾಪತ್ತೆಯಾಗಿದ್ದಾರೆ. ಸೋಮವಾರ ಸಂಜೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಒಟ್ಟು 389 ರಸ್ತೆಗಳನ್ನು ವಾಹನ ಸಂಚಾರಕ್ಕೆ ಮುಚ್ಚಲಾಗಿತ್ತು. ಭಾರೀ ಮಳೆಯಿಂದಾಗಿ ವಿದ್ಯುತ್ ಮತ್ತು ನೀರು ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದೂ ಅಧಿಕಾರಿಗಳು ಹೇಳಿದರು.