ಹಿಮಾಚಲ ಪ್ರದೇಶ : ಭೂಕುಸಿತಕ್ಕೆ ಬಸ್ ಸಿಲುಕಿ ಕನಿಷ್ಠ 15 ಮಂದಿ ಮೃತ್ಯು
Update: 2025-10-07 21:52 IST
Photo Credit : HT Photo
ಬಿಲಾಸ್‌ಪುರ,ಅ.7: ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಬಸ್ಸೊಂದು ಸಮಾಧಿಯಾಗಿದ್ದು, ಅದರಲ್ಲಿದ್ದ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.
30 ಪ್ರಯಾಣಿಕರಿದ್ದ ಬಸ್ ಹರ್ಯಾಣದ ರೋಹ್ಟಕ್‌ನಿಂದ ಬಿಲಾಸಪುರ ಸಮೀಪದ ಗುಮಾರ್ವಿನ್‌ಗೆ ಪ್ರಯಾಣಿಸುತ್ತಿದ್ದಾಗ ಬಾಲುಘಾಟ್ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಮೃತರ ಸಂಖ್ಯೆ ಇನ್ನೂ ಏರುವ ಭೀತಿಯಿದೆಯೆಂದು ಮೂಲಗಳು ತಿಳಿಸಿವೆ.
ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸುಖವೀಂದರ್ ಸುಖು ಅವಘಡಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಣಿವೆ ಪ್ರದೇಶದಲ್ಲಿ ಬಸ್ ಪ್ರಯಾಣಿಸುತ್ತಿದ್ದಾಗ ಇಡೀ ಬೆಟ್ಟವೇ ಆ ಪ್ರದೇಶದಲ್ಲಿ ಕುಸಿದಿದೆ. ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.