×
Ad

ಹಿಂದಿ ಹೇರಿಕೆ ವಿವಾದ | ಬಿಜೆಪಿಗೆ ರಾಜೀನಾಮೆ; ವಿಜಯ್ ಅವರ ಟಿವಿಕೆ ಸೇರಿದ ನಟಿ ರಂಜನಾ ನಾಚಿಯಾರ್

Update: 2025-02-26 20:18 IST

 ನಟಿ ರಂಜನಾ ನಾಚಿಯಾರ್ | PC :  /X @RanjanaNachiyar 

ಚೆನ್ನೈ: ನಟಿ ರಂಜನಾ ನಾಚಿಯಾರ್ ಅವರು ನಟ ವಿಜಯ್ ಅವರ ತಮಿಳಗ ವೆಟ್ರಿ ಕಝಂಗಂಗೆ ಬುಧವಾರ ಸೇರ್ಪಡೆಯಾಗಿದ್ದಾರೆ.

ಬಿಜೆಪಿಗೆ ರಾಜೀನಾಮೆ ನೀಡಿದ ದಿನದ ಬಳಿಕ ನಾಚಿಯಾರ್ ಅವರು ತಮಿಳಗ ವೆಟ್ರಿ ಕಝಂಗಂಗೆ ಸೇರಿದ್ದಾರೆ. ಅವರು 8 ವರ್ಷಗಳ ಹಿಂದೆ ಬಿಜೆಪಿ ಸೇರಿದ್ದರು. ಹಿಂದಿ ಹೇರಿಕೆ ಸೇರಿದಂತೆ ಅದರ ನೀತಿಯ ಕುರಿತು ಅಸಮಾಧಾನಗೊಂಡು ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಚೆನ್ನೈ ಸಮೀಪದ ಖಾಸಗಿ ರಿಸಾರ್ಟ್‌ನಲ್ಲಿ ನಟ ವಿಜಯ್ ಆಯೋಜಿಸಿದ್ದ ಟಿವಿಕೆಯ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬುಧವಾರ ಬೆಳಗ್ಗೆ ಉಪಸ್ಥಿತರಿದ್ದ ನಾಚಿಯಾರ್ ಅವರು, ವಿಜಯ್ ಅವರನ್ನು ಮುಂದಿನ ಎಂಜಿಆರ್ ಎಂದು ಕರೆಯುವ ಮೂಲಕ ತನ್ನ ನೂತನ ರಾಜಕೀಯ ನಾಯಕನ ಬಗೆಗಿನ ಅಭಿಮಾನ ವ್ಯಕ್ತಪಡಿಸಿದರು.

ವಿಜಯ್ ಅವರ ರಾಷ್ಟ್ರವಾದ ಹಾಗೂ ದ್ರಾವಿಡ ರಾಜಕೀಯದ ಮಿಶ್ರಣ ತನ್ನನ್ನು ಪ್ರೇರೇಪಿಸಿದೆ. ಅಲ್ಲದೆ, ಟಿವಿಕೆ ತನ್ನ ರಾಜಕೀಯ ಭವಿಷ್ಯಕ್ಕೆ ಮಾದರಿ ವೇದಿಕೆಯಾಗಿದೆ. ವಿಜಯ್ ಅವರು ತಮಿಳುನಾಡಿಗೆ ಅತಿ ದೊಡ್ಡ ಭರವಸೆ ಎಂದು ಅವರು ಹೇಳಿದರು.

ಬಿಜೆಪಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ನಾಚಿಯಾರ್, ತಮಿಳು ಮಹಿಳೆಯಾಗಿ ತ್ರಿಭಾಷಾ ನೀತಿ ಹೇರಿಕೆ, ದ್ರಾವಿಡರ ಬಗ್ಗೆ ಹೆಚ್ಚುತ್ತಿರುವ ದ್ವೇಷ, ತಮಿಳುನಾಡಿನ ಅಗತ್ಯತೆ ಹಾಗೂ ಆಕಾಂಕ್ಷೆಗಳ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಎಲ್ಲಾ ಮಕ್ಕಳು ಭಾಷಾ ಶಾಸ್ತ್ರಜ್ಞರಲ್ಲ. ಇನ್ನೊಂದು ಭಾಷೆ ಕಲಿಯುವಂತೆ ಮಕ್ಕಳಿಗೆ ಬಲವಂತಪಡಿಸುವ ಅಗತ್ಯತೆ ಇಲ್ಲ ಎಂದು ನಾಚಿಯಾರ್ ತಿಳಿಸಿದ್ದಾರೆ.

ಈ ಸಭೆಯಲ್ಲಿದ್ದ ಟಿವಿಕೆ ಮುಖ್ಯಸ್ಥ ವಿಜಯ್ ಕೂಡ ನೂತನ ಶಿಕ್ಷಣ ನೀತಿ ವಿರುದ್ಧ ಧ್ವನಿ ಎತ್ತಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News