ಹಿಝ್ಹುಲ್ ಮುಜಾಹಿದೀನ್ ಭಯೋತ್ಪಾದಕನಿಗೆ 10 ವರ್ಷ ಜೈಲು
ಸಾಂದರ್ಭಿಕ ಚಿತ್ರ | PC : freepik.com
ಲಕ್ನೋ : ಉತ್ತರಪ್ರದೇಶದ ಮೊರಾದಾಬಾದ್ ನ ನ್ಯಾಯಾಲಯವೊಂದು, ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪದಲ್ಲಿ ಹಿಝ್ಬುಲ್ ಮುಜಾಹಿದೀನ್ ಉಗ್ರ ಉಲ್ಫತ್ ಹುಸೈನ್ ಗೆ 10 ವರ್ಷಗಳ ಕಠಿಣ ಜೈಲುವಾಸ ಶಿಕ್ಷೆ ವಿಧಿಸಿದೆ.
ಸೋಮವಾರ ನೀಡಿದ ಆದೇಶದಲ್ಲಿ, ಮೊರಾದಾಬಾದ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶೆ ಛಾಯಾ ಶರ್ಮಾ ಭಯೋತ್ಪಾದಕನಿಗೆ 48,000 ರೂ. ದಂಡವನ್ನೂ ವಿಧಿಸಿದರು.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿವಾಸಿ ಉಲ್ಫತ್ ಹುಸೈನ್ ಯಾನೆ ಮುಹಮ್ಮದ್ ಸೈಫುಲ್ ಇಸ್ಲಾಮ್ 2002ರಿಂದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಹಾಗೂ 2008ರಲ್ಲಿ ಜಾಮೀನು ಲಭಿಸಿದ ಬಳಿಕ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸುರೇಶ್ ಸಿಂಗ್ ತಿಳಿಸಿದರು.
ಮೊರಾದಾಬಾದ್ ನ್ಯಾಯಾಲಯವು ಅವರ ವಿರುದ್ಧ 2015 ಮತ್ತು 2025ರಲ್ಲಿ ವಾರಂಟ್ ಗಳನ್ನು ಹೊರಡಿಸಿತ್ತು. ಅವನ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನವನ್ನು ಘೋಷಿಸಲಾಗಿತ್ತು.
ಮಾರ್ಚ್ 8ರಂದು, ಉತ್ತರಪ್ರದೇಶ ಭಯೋತ್ಪಾದನೆ ನಿಗ್ರಹ ದಳ ಮತ್ತು ಕತ್ಘರ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವನನ್ನು ಪೂಂಚ್ ನಲ್ಲಿ ಬಂಧಿಸಲಾಗಿತ್ತು.