×
Ad

ಉತ್ತರ ಪ್ರದೇಶ | ವಾರಾಣಸಿಯಲ್ಲಿ ಹಾಕಿ ದಂತಕತೆ ಮುಹಮ್ಮದ್ ಶಾಹಿದ್ ರ ನಿವಾಸ ನೆಲಸಮ

ರಸ್ತೆ ವಿಸ್ತರಣೆ ಯೋಜನೆಗಾಗಿ ನೆಲಸಮಗೊಂಡ 13 ಮನೆಗಳು

Update: 2025-09-29 18:49 IST

ಮುಹಮ್ಮದ್ ಶಾಹಿದ್ | PC : X 

ವಾರಾಣಸಿ: ರಸ್ತೆ ವಿಸ್ತರಣೆ ಯೋಜನೆಯ ಭಾಗವಾಗಿ ರವಿವಾರ ನೆಲಸಮಗೊಂಡ 13 ಮನೆಗಳ ಪೈಕಿ ಭಾರತದ ಹಾಕಿ ದಂತಕತೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಶಾಹಿದ್ ರ ನಿವಾಸವೂ ಸೇರಿದೆ ಎಂದು ವರದಿಯಾಗಿದೆ.

ವಾರಾಣಸಿ ಕೋರ್ಟ್ ರಸ್ತೆಯಿಂದ ಸಂಧಾವರೆಗಿನ ರಸ್ತೆ ವಿಸ್ತರಣೆ ಯೋಜನೆಯಡಿ ಕೋರ್ಟ್ ರಸ್ತೆ ವಿಭಜಕದವರೆಗೆ ನಡೆದ ನೆಲಸಮ ಕಾರ್ಯಾಚರಣೆಯಲ್ಲಿ ಅವರ ನಿವಾಸ ನೆಲಸಮಗೊಂಡಿದೆ.

ನೆಲಸಮ ಕಾರ್ಯಾಚರಣೆಗೂ ಮುನ್ನ ಎಲ್ಲ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ಪ್ರಾಧಿಕಾರಗಳು ದೃಢಪಡಿಸಿವೆ. ಆದರೆ, ಪದೇ ಪದೇ ನಿರ್ದೇಶನ ಹಾಗೂ ಅಂತಿಮ ಗಡುವು ನೀಡಿದರೂ, ಗುರುತು ಮಾಡಲಾಗಿರುವ ತಮ್ಮ ಮನೆಗಳ ಭಾಗವವನ್ನು ಸಂತ್ರಸ್ತ ಕುಟುಂಬಗಳು ತೆರವುಗೊಳಿಸಿರಲಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರ ನೆಲಸಮ ಕಾರ್ಯಾಚರಣೆಗೆ ಗಡುವು ನೀಡಲಾಗಿತ್ತು ಎಂದು ವಾರಾಣಸಿಯ ಉಪ ವಿಭಾಗಾಧಿಕಾರಿ ಅಲೋಕ್ ವರ್ಮ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ನಾವು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಿಸಿದ್ದೇವೆ ಹಾಗೂ ಒಂದು ವಾರದ ಹಿಂದೆಯೇ ಗಡುವನ್ನೂ ನೀಡಿದ್ದೆವು. ರಸ್ತೆ ಯೋಜನೆಗೆ ಗುರುತಿಸಲಾಗಿರುವ ಜಾಗದಿಂದ ನಿಮ್ಮ ಮನೆಯ ಭಾಗಗಳನ್ನು ತೆರವುಗೊಳಿಸಬೇಕು, ಇಲ್ಲವಾದರೆ ಜಿಲ್ಲಾಡಳಿತವೇ ಮಾಡುತ್ತದೆ ಎಂದು ನಾವು ಅವರಿಗೆ ತಿಳಿಸಿದ್ದೆವು. ಆದರೆ, ಕುಟುಂಬಗಳು ಕ್ರಮ ಕೈಗೊಳ್ಳದೆ ಇದ್ದುದರಿಂದ, ನಾವು ಆ ಕೆಲಸ ಮಾಡಿದ್ದೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

1920ರಲ್ಲಿ ನಿರ್ಮಾಣ ಮಾಡಲಾಗಿದ್ದ ಶಾಹಿದ್ ರ ನಿವಾಸವನ್ನು ನಗರದ ಉದಯೋನ್ಮುಖ ಆಟಗಾರರಿಗೆ ಪ್ರೇರಣೆ ನೀಡಿದ್ದ ಹೆಗ್ಗುರುತು ಎಂದೇ ಪರಿಗಣಿಸಲಾಗಿತ್ತು.

ಶಾಹಿದ್ ಕುಟುಂಬದ ಒಂಭತ್ತು ಸದಸ್ಯರ ಪೈಕಿ ಏಳು ಮಂದಿ ಜಿಲ್ಲಾಡಳಿತದಿಂದ ಪರಿಹಾರವನ್ನು ಸ್ವೀಕರಿಸಿದ್ದಾರೆ. ಉಳಿದ ಇಬ್ಬರು ಕುಟುಂಬದ ಸದಸ್ಯರು ಮನೆಯಲ್ಲೇ ಉಳಿದಿದ್ದು, ತಮಗೆ ಪರಿಹಾರ ಸ್ವೀಕರಿಸಲು ಇಷ್ಟವಿದೆಯೊ ಇಲ್ಲವೊ ಎಂಬ ನಿರ್ಧಾರವನ್ನು ಈವರೆಗೆ ಸ್ಪಷ್ಟಪಡಿಸಿಲ್ಲ ಎಂದು ಉಪ ವಿಭಾಗಾಧಿಕಾರಿ ಅಲೋಕ್ ವರ್ಮ ಹೇಳಿದ್ದಾರೆ.

ಈ ನಡುವೆ, ಪರಿಹಾರ ಸ್ವೀಕರಿಸಿದ ಹೊರತಾಗಿಯೂ ತಮ್ಮ ಪೂರ್ವಜರ ನಿವಾಸವನ್ನು ಕಳೆದುಕೊಳ್ಳುತ್ತಿರುವುದಕ್ಕೆ ಶಾಹಿದ್ ಕುಟುಂಬದ ಸದಸ್ಯರು ಖೇದ ವ್ಯಕ್ತಪಡಿಸಿದ್ದಾರೆ.

“ಈ ಮನೆಯಲ್ಲಿ ನಮ್ಮ ನೆನಪುಗಳಿವೆ. ಇದು ನಮ್ಮ ಮನೆ. ನಾವು ಈ ಜಾಗವನ್ನು ಕಳೆದುಕೊಳ್ಳಲಿದ್ದೇವೆ. ಜಿಲ್ಲಾಡಳಿತವು ಏಳು ಮಂದಿ ಹಕ್ಕುದಾರರಿಗೆ ಪರಿಹಾರ ನೀಡಿದೆ. ಆದರೆ, ನಮಗೆ ಹೋಗಲು ಬೇರೆ ಯಾವುದೇ ಸ್ಥಳವಿಲ್ಲ. ಹೀಗಾಗಿ, ಇಬ್ಬರು ಹಕ್ಕುದಾರರು ಈಗಲೂ ಈ ಮನೆಯಲ್ಲಿ ಉಳಿದಿದ್ದಾರೆ” ಎಂದು ಶಾಹಿದ್ ಅವರ ಸಂಬಂಧಿಕರಾದ ನಝ್ನೀನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಾಕಿ ದಂತಕತೆ ಮುಹಮ್ಮದ್ ಶಾಹಿದ್ ಅವರಿಗೆ 1986ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಅವರು ಜುಲೈ 20, 2016ರಂದು ನಿಧನರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News