‘ದಿಲ್ಲಿಯಲ್ಲಿ ಮತ್ತೆ ಚುನಾವಣೆ ನಡೆಸಿ; ಬಿಜೆಪಿ 10 ಕ್ಕೂ ಹೆಚ್ಚು ಸ್ಥಾನ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ’: ಖುಲಾಸೆಯಾದ ಬಳಿಕ ಕೇಜ್ರಿವಾಲ್ ಸವಾಲು
Photo : x@ArvindKejriwal
ಹೊಸದಿಲ್ಲಿ: “ದಿಲ್ಲಿಯಲ್ಲಿ ಮತ್ತೆ ಚುನಾವಣೆ ನಡೆಸಿ. ಬಿಜೆಪಿ 10 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ನಾನು ರಾಜಕೀಯ ತ್ಯಜಿಸುತ್ತೇನೆ,” ಎಂದು ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡ ಬಳಿಕ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ನೇರ ಸವಾಲು ಹಾಕಿದ್ದಾರೆ.
ಖುಲಾಸೆಯಾದ ಕೆಲವೇ ಗಂಟೆಗಳ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, “ಮೋದಿ ಜಿ ಅವರಿಗೆ ನಾನು ಸವಾಲು ಹಾಕುತ್ತೇನೆ. ನಿಮಗೆ ಧೈರ್ಯವಿದ್ದರೆ ದಿಲ್ಲಿಯಲ್ಲಿ ಮತ್ತೆ ಚುನಾವಣೆ ನಡೆಸಿ. ನೀವು ಹತ್ತು ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಪಡೆದರೆ ನಾನು ರಾಜಕೀಯ ತ್ಯಜಿಸುತ್ತೇನೆ. ದಿಲ್ಲಿಯ ಜನರು ನಿಮ್ಮಿಂದ ಬೇಸತ್ತಿದ್ದಾರೆ,” ಎಂದು ಹೇಳಿದರು.
ಶುಕ್ರವಾರ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಒಟ್ಟು 23 ಆರೋಪಿಗಳನ್ನು ರೌಸ್ ಅವೆನ್ಯೂ ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತು. ಬಿಆರ್‌ಎಸ್ ಮಾಜಿ ನಾಯಕಿ ಕೆ. ಕವಿತಾ ಕೂಡ ಆರೋಪಿಗಳ ಪಟ್ಟಿಯಲ್ಲಿ ಇದ್ದರು. ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ವಿಶ್ವಾಸಾರ್ಹ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ. ‘ವಿಶಾಲ ಪಿತೂರಿ’ ಹಾಗೂ ‘ಕ್ರಿಮಿನಲ್ ಉದ್ದೇಶ’ ಕುರಿತ ಆರೋಪಗಳು ನ್ಯಾಯಾಂಗ ಪರಿಶೀಲನೆಗೆ ತಡೆದುಕೊಳ್ಳುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕಳೆದ ಫೆಬ್ರವರಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ದಿಲ್ಲಿ ಸಂಕಷ್ಟದಲ್ಲಿದೆ ಎಂದು ಕೇಜ್ರಿವಾಲ್ ಆರೋಪಿಸಿದರು. “ಇಡೀ ದಿಲ್ಲಿ ಹಾಳಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧಿಕಾರದ ಆಸೆಯ ಪರಿಣಾಮವನ್ನು ದಿಲ್ಲಿಯ ಮೂರು ಕೋಟಿ ಜನರು ಅನುಭವಿಸಿದ್ದಾರೆ. ಹೋಗಿ ಜನರನ್ನು ಕೇಳಿ,” ಎಂದು ಹೇಳಿದರು.
ದಿಲ್ಲಿಯಲ್ಲಿ ಎಎಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ರೂಪಿಸಲಾದ “ಸ್ವತಂತ್ರ ಭಾರತದ ಅತಿದೊಡ್ಡ ರಾಜಕೀಯ ಪಿತೂರಿ” ಇದೇ ಪ್ರಕರಣ ಎಂದು ಕೇಜ್ರಿವಾಲ್ ಪುನರುಚ್ಚರಿಸಿದರು. “ಅಧಿಕಾರಕ್ಕಾಗಿ ದೇಶ ಮತ್ತು ಸಂವಿಧಾನದೊಂದಿಗೆ ಯಾರೂ ಈ ರೀತಿಯಾಗಿ ಆಟವಾಡಬಾರದು,” ಎಂದರು.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದರಲ್ಲಿ ಯಾವುದೇ ಹುರುಳಿಲ್ಲ. ಪ್ರಕರಣವು ಆರಂಭದಿಂದಲೂ ಕಟ್ಟುಕಥೆ. ಏನಾದರೂ ಸತ್ಯವಿದ್ದರೆ ವಿಚಾರಣೆ 15 ಅಥವಾ 20 ವರ್ಷಗಳ ಕಾಲ ನಡೆಯುತ್ತಿತ್ತು. ಅನೇಕ ಸಾಕ್ಷಿಗಳನ್ನು ಕರೆಯಲಾಗುತ್ತಿತ್ತು; ಸಾಕ್ಷ್ಯಗಳನ್ನು ಮಂಡಿಸಲಾಗುತ್ತಿತ್ತು. ಆದರೆ ನ್ಯಾಯಾಲಯವೇ ಇದನ್ನು ಕ್ಷುಲ್ಲಕ, ನಕಲಿ ಹಾಗೂ ನಿಷ್ಪ್ರಯೋಜಕ ಪ್ರಕರಣವೆಂದು ಹೇಳಿದೆ. ಇದು ನನ್ನ ಮಾತಲ್ಲ; ನ್ಯಾಯಾಲಯದ ಮಾತು,” ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಸೇರಿ ಎಎಪಿಯನ್ನು ನಾಶಮಾಡಲು ಪಿತೂರಿ ರೂಪಿಸಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದರು. “ಈ ಸಂಪೂರ್ಣ ಪಿತೂರಿಯನ್ನು ರೂಪಿಸಿದವರು ನರೇಂದ್ರ ಮೋದಿ ಮತ್ತು ಅಮಿತ್ ಶಾ. ಅವರು ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು,” ಎಂದರು.
ಈ ಪ್ರಕರಣದಲ್ಲಿ ಸಿಬಿಐ ಮತ್ತು ಈಡಿ ಎರಡೂ ಆರೋಪಪಟ್ಟಿ ಸಲ್ಲಿಸಿದ್ದನ್ನು ಉಲ್ಲೇಖಿಸಿದ ಅವರು, “ವಿಚಾರಣೆ ಆರಂಭಕ್ಕೂ ಮುನ್ನ, ಪ್ರಾಥಮಿಕ ಹಂತದಲ್ಲಿ ಸಾಕ್ಷ್ಯಗಳು ವಿಚಾರಣೆಗೆ ಸೂಕ್ತವೇ ಎಂಬುದನ್ನು ಮಾತ್ರ ನ್ಯಾಯಾಲಯ ಪರಿಶೀಲಿಸಬೇಕಾಗಿತ್ತು. ಸುಮಾರು 600 ಪುಟಗಳ ಆದೇಶದಲ್ಲಿ ಎಲ್ಲಾ ಸಾಕ್ಷ್ಯಗಳು ಮತ್ತು ಸಾಕ್ಷಿ ಹೇಳಿಕೆಗಳನ್ನು ಪರಿಶೀಲಿಸಿದ ನಂತರ ‘ಸಾಕಷ್ಟು ಪುರಾವೆಗಳಿಲ್ಲ’ ಎಂದು ನ್ಯಾಯಾಲಯ ತೀರ್ಮಾನಿಸಿದೆ,” ಎಂದು ಹೇಳಿದರು.
“ಈ ಪ್ರಕರಣವನ್ನು ವಿಚಾರಣೆ ನಡೆಸಲು ಒಂದು ಸಣ್ಣ ಸಾಕ್ಷ್ಯವೂ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿಚಾರಣೆಗೆ ಹೋಗಿದ್ದರೆ ಅದು ಅಸಾಧ್ಯವಾಗುತ್ತಿತ್ತು,” ಎಂದು ಅವರು ಪ್ರತಿಪಾದಿಸಿದರು.
ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದ ಕೇಜ್ರಿವಾಲ್, “ಅಂತಿಮವಾಗಿ ಸತ್ಯವು ಸುಳ್ಳಿನ ಮೇಲೆ ಮೇಲುಗೈ ಸಾಧಿಸಿದೆ. ನ್ಯಾಯ ದೊರೆತಿದೆ,” ಎಂದು ಹೇಳಿದರು. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ತಮ್ಮ ಕಾನೂನು ತಂಡಕ್ಕೂ ಅವರು ಕೃತಜ್ಞತೆ ಸಲ್ಲಿಸಿದರು.