×
Ad

ಗೃಹ ಸಚಿವ ಅಮಿತ್ ಶಾ ಅವರಿಂದ ಭಾರತ-ಪಾಕಿಸ್ತಾನ ಗಡಿ, ವಿಮಾನ ನಿಲ್ದಾಣಗಳ ಭದ್ರತೆ ಪರಿಶೀಲನೆ

Update: 2025-05-09 22:32 IST

ಅಮಿತ್ ಶಾ | PC : PTI 

ಮುಂಬೈ: ಪಾಕಿಸ್ತಾನದೊಂದಿಗಿನ ಸೇನಾ ಸಂಘರ್ಷದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಾಕಿಸ್ತಾನದೊಂದಿಗಿನ ಭಾರತದ ಗಡಿ ಹಾಗೂ ದೇಶದ ವಿಮಾನ ನಿಲ್ದಾಣಗಳಲ್ಲಿನ ಪ್ರಸಕ್ತ ಭದ್ರತಾ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಮ್ಮುವಿನ ಅಂತರ ರಾಷ್ಟ್ರೀಯ ಗಡಿಯಲ್ಲಿ ಒಳ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ, ಕನಿಷ್ಠ 7 ಮಂದಿ ಶಂಕಿತ ಉಗ್ರರನ್ನು ಹತ್ಯೆಗೈಯಲಾಗಿದೆ ಹಾಗೂ ಪಾಕಿಸ್ತಾನದ ರೇಂಜರ್‌ ಗಳ ಠಾಣೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ಹೇಳಿದ ಗಂಟೆಗಳ ಬಳಿಕ ಈ ಭದ್ರತಾ ಪರಿಶೀಲನಾ ಸಭೆ ನಡೆದಿದೆ.

ಭಾರತ-ಪಾಕಿಸ್ತಾನ ಗಡಿಯಾದ್ಯಂತ ಭದ್ರತಾ ಪರಿಸ್ಥಿತಿ ಪರಿಶೀಲಿಸುವುದರೊಂದಿಗೆ ಅಮಿತ್ ಶಾ ಅವರು ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳನ್ನು ಕೂಡ ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತ-ಪಾಕಿಸ್ತಾನದ ಗಡಿಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಾಯುತ್ತಿದ್ದರೆ, ದೇಶಾದ್ಯಂತ ವಿಮಾನ ನಿಲ್ದಾಣಗಳು, ಮೆಟ್ರೊ ಜಾಲ ಹಾಗೂ ಇತರ ಪ್ರಮುಖ ಸ್ಥಾಪನೆಗಳನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ರಕ್ಷಿಸುತ್ತಿದೆ.

ಸಭೆಯಲ್ಲಿ ಭಾಗವಹಿಸಿದವರಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್, ಗುಪ್ತಚರ ದಳದ ನಿರ್ದೇಶಕ ತಪನ್ ದೇಕಾ, ಬಿಎಸ್‌ಎಫ್, ಸಿಐಎಸ್‌ಎಫ್ ಹಾಗೂ ನಾಗರಿಕ ವಾಯು ಯಾನ ಭದ್ರತಾ ದಳದ ಮಹಾ ನಿರ್ದೇಶಕರು ಪಾಲ್ಗೊಂಡಿದ್ದರು.

ಭಾರತ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬುಧವಾರ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿದ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News