ಆಸ್ಕರ್ ಸ್ಪರ್ಧೆಗೆ ಭಾರತದಿಂದ ‘ ಹೋಮ್‌ಬೌಂಡ್’ ಆಯ್ಕೆ
ಹೋಮ್‌ಬೌಂಡ್ |
ಚೆನ್ನೈ,ಸೆ.20: ನೀರಜ್ ಘಾಯ್‌ವಾನ್ ನಿರ್ದೇಶನದ ‘ಹೋಮ್‌ಬೌಂಡ್’, 98ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಈ ಚಿತ್ರವು ಸ್ಪರ್ಧಿಸಲಿದೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥರಾದ ಎನ್.ಚಂದ್ರ ತಿಳಿಸಿದ್ದಾರೆ.
ಆಸ್ಕರ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ವಿಭಿನ್ನ ಭಾಷೆಗಳ 24 ಚಲನಚಿತ್ರಗಳು ಪೈಪೋಟಿ ನಡೆಸಿದ್ದವು ಎಂದವರು ಹೇಳಿದ್ದಾರೆ. ತೀರ್ಪುಗಾರರ ಮಂಡಳಿಯಲ್ಲಿ 14 ಮಂದಿ ಸದಸ್ಯರಿದ್ದರು ಎಂದವರು ತಿಳಿಸಿದ್ದಾರೆ.
‘ಪುಷ್ಪ2, ಬೆಂಗಾಲ್ ಫೈಲ್ಸ್, ತನ್ವಿ ದಿ ಗ್ರೇಟ್,ಕೇಸರಿ:ಚಾಪ್ಟರ್ 2,ಕಣ್ಣಪ್ಪ, ಕುಬೇರ, ಫುಲೆ ಮುಂತಾದ ಸಿನೆಮಾಗಳ ಪೈಪೋಟಿಯ ನಡುವೆ ಹೋಮ್ ಬೌಂಡ್ ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಗಿದೆ.
ಇಶಾನ್‌ಕಟ್ಟರ್, ವಿಶಾಲ್ ಜೇಥ್ವಾ ಹಾಗೂ ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಉತ್ತರ ಭಾರತದ ಸಣ್ಣ ಹಳ್ಳಿಯೊಂದರ ಇಬ್ಬರು ಬಾಲ್ಯ ಸ್ನೇಹಿತರು, ತಮಗೆ ದೀರ್ಘ ಸಮಯದಿಂದ ನಿರಾಕರಿಸಲ್ಪಟ್ಟಿದ್ದ ಘನತೆಯನ್ನು ತಂದುಕೊಡುವಂತಹ ಪೊಲೀಸ್ ನೌಕರಿಯ ಬೆನ್ನೆತ್ತಿ ಹೋಗುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಹೋಮ್‌ಬೌಂಡ್ ನಿರ್ಮಾಣಗೊಂಡಿದೆ.
ಕರಣ್‌ಜೋಹರ್, ಅದರ್ ಪೂನಾವಾಲಾ, ಅಪೂರ್ವಾ ಮೆಹ್ತಾ ಹಾಗೂ ಸೊಮೇನ್ ಮಿಶ್ರಾ ನಿರ್ಮಾಪಕರಾಗಿರುವ ಹೋಮ್ ಬೌಂಡ್ ಚಿತ್ರಕ್ಕೆ ಮಾರಿಜ್ಕೆ ಡಿಸೋಜಾ ಹಾಗೂ ಮೆಲಿಟಾ ಟೊಸ್ಕನ್ ಡು ಪ್ಲೇಂಟಿಯರ್ ಸಹ ನಿರ್ಮಾಪಕರು. ಹಾಲಿವುಡ್‌ನ ಪ್ರಸಿದ್ಧ ಚಿತ್ರನಿರ್ದೇಶಕ ಮಾರ್ಟಿನ್ ಸ್ಕೊರ್ಸೆಸ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.