ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಜೋಡಿ ಕೊಲೆ: ಬೈದಿದಕ್ಕೆ ಮಾಲಕಿ ಮತ್ತು ಮಗನನ್ನು ಹತ್ಯೆಗೈದ ಕಾರ್ಮಿಕ
ಕೊಲೆಯಾದ ಮಹಿಳೆ ರುಚಿಕಾ ಸೇವಾನಿ ಮತ್ತು ಆರೋಪಿ ಮುಖೇಶ್ (Photo credit: indiatoday.in)
ಹೊಸದಿಲ್ಲಿ: ಲಜಪತ್ ನಗರದಲ್ಲಿ ಬುಧವಾರ ರಾತ್ರಿ ಮಹಿಳೆ ಮತ್ತು ಆಕೆಯ ಹದಿಹರೆಯದ ಪುತ್ರನ ಭೀಕರ ಹತ್ಯೆ ನಡೆದಿದ್ದು ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ.
ದಿಲ್ಲಿ ಪೊಲೀಸರ ಪ್ರಕಾರ, ಜುಲೈ 2 ರಂದು ರಾತ್ರಿ 9:43 ರ ಸುಮಾರಿಗೆ ಮೃತರ ಪತಿ ಕುಲದೀಪ್ ಸೇವಾನಿ ತನ್ನ ಪತ್ನಿ ಮತ್ತು ಮಗನಿಗೆ ಪದೇ ಪದೇ ಕರೆ ಮಾಡಿದಾಗಲೂ ಉತ್ತರಿಸದ ಕಾರಣ, ಅವರು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. .
ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಬೀಗ ಹಾಕಿದ ಬಾಗಿಲನ್ನು ಒಡೆದು ನೋಡಿದಾಗ ರುಚಿಕಾ ಸೇವಾನಿ (42) ಮತ್ತು ಅವರ 14 ವರ್ಷದ ಮಗನ ಮೃತದೇಹಗಳು ಪತ್ತೆಯಾಗಿವೆ.
ರುಚಿಕಾ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರೆ, ಅವರ ಮಗನ ಮೃತದೇಹ ಸ್ನಾನಗೃಹದಲ್ಲಿ ಪತ್ತೆಯಾಗಿದೆ. ಇಬ್ಬರ ಮೇಲೂ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರುಚಿಕಾ ಸೇವಾನಿ ತನ್ನ ಪತಿಯೊಂದಿಗೆ ಲಜ್‌ಪತ್ ನಗರ ಮಾರುಕಟ್ಟೆಯಲ್ಲಿ ಒಂದು ಗಾರ್ಮೆಂಟ್ ಅಂಗಡಿಯನ್ನು ನಡೆಸುತ್ತಿದ್ದರು. ಅವರ ಮಗ 10 ನೇ ತರಗತಿಯಲ್ಲಿ ಓದುತ್ತಿದ್ದ.
ಪ್ರಮುಖ ಶಂಕಿತನನ್ನು ಬಿಹಾರ ಮೂಲದ, 24 ವರ್ಷದ ಮುಖೇಶ್ ಎಂದು ಗುರುತಿಸಲಾಗಿದ್ದು, ಸೇವಾನಿ ಕುಟುಂಬವು ತಮ್ಮ ಅಂಗಡಿಯಲ್ಲಿ ಚಾಲಕ ಮತ್ತು ಸಹಾಯಕನಾಗಿ ಆತನನ್ನು ನೇಮಿಸಿಕೊಂಡಿದ್ದರು. ಕೊಲೆಗೈದ ಬಳಿಕ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರಂಭಿಕ ವಿಚಾರಣೆಯ ಸಮಯದಲ್ಲಿ, ಮುಖೇಶ್ ಕೊಲೆಗಳನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ರುಚಿಕಾ ಇತ್ತೀಚೆಗೆ ಬೈದಿದ್ದರಿಂದ ಹಿಂಸಾತ್ಮಕ ಕೃತ್ಯ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.