×
Ad

ಆಗ್ರಾದಲ್ಲಿ ನಡೆದ ಮುಸ್ಲಿಂ ಯುವಕನ ಕೊಲೆ ಪಹಲ್ಗಾಮ್ ದಾಳಿಗೆ ಸೇಡು ಎಂದು ಸುಳ್ಳು ಪ್ರಚಾರ!

Update: 2025-04-25 16:27 IST

Screengrab:X/@SachinGuptaUP

ಆಗ್ರಾ: ಉತ್ತರ ಪ್ರದೇಶದ ಆಗ್ರಾದ ಶಿಲ್ಪಗ್ರಾಮ್ ರಸ್ತೆಯಲ್ಲಿರುವ ರೆಸ್ಟೋರೆಂಟ್‌ ಹೊರಗೆ ಬುಧವಾರ ಮುಸ್ಲಿಂ ಯುವಕನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆದರೆ, ಈ ಘಟನೆ ಪಹಲ್ಗಾಮ್ ದಾಳಿಗೆ ಪ್ರತೀಕಾರ ಎಂದು ಹೇಳಿಕೊಂಡು ವೀಡಿಯೊವೊಂದನ್ನು ಹಂಚಿಕೊಳ್ಳಲಾಗಿತ್ತು. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು.

ಏನಿದು ಘಟನೆ?

ಬುಧವಾರ ತಡರಾತ್ರಿ ಸ್ಕೂಟರ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಲ್ಫಾಮ್(27) ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಧಾಬಾದ ಉದ್ಯೋಗಿಯಾಗಿರುವ ಗುಲ್ಫಾಮ್ ಸಹೋದರ ಸೈಫ್ ಅಲಿ(25) ಕೂಡ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರು.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಗೋರಕ್ಷಕರು ಎಂದು ಹೇಳಿಕೊಂಡ ಇಬ್ಬರು ಈ ಹತ್ಯೆ ಪಹಲ್ಗಾಮ್ ದಾಳಿಗೆ ಪ್ರತೀಕಾರ ಎಂದು ಸುಳ್ಳು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು.

ವೀಡಿಯೊದಲ್ಲಿ ಕ್ಷತ್ರಿಯ ಗೋ ರಕ್ಷಣಾ ದಳದ ಸದಸ್ಯರು ಎಂದು ಹೇಳಿಕೊಂಡ ಇಬ್ಬರು ಸೊಂಟದಲ್ಲಿ ಪಿಸ್ತೂಲು ಮತ್ತು ಚಾಕುಗಳನ್ನು ಇಟ್ಟುಕೊಂಡಿರುವುದು ಕಂಡು ಬಂದಿದೆ. ಗುಲ್ಫಾಮ್ ಹತ್ಯೆಯನ್ನು ತಾವೇ ಮಾಡಿರುವುದು ಎಂದು ಅವರು ಹೇಳಿಕೊಂಡಿದ್ದಾರೆ. ಗುಂಡು ಹಾರಿಸುವ ಮೊದಲು ಆತನ ಹೆಸರು ಮತ್ತು ಧರ್ಮವನ್ನು ಕೇಳಲಾಗಿದೆ ಎಂದು ಹೇಳಿದ್ದಾರೆ.

ಈ ಕುರಿತ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.

ಪೊಲೀಸರು ಹೇಳಿದ್ದೇನು?

ತಾಜ್‌ಗಂಜ್‌ ಪೊಲೀಸರು ಈ ಕುರಿತು ಪ್ರತಿಕ್ರಿಯಿಸಿ, ಇದು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆದ ಘಟನೆಯಲ್ಲ. ಆಗ್ರಾದಲ್ಲಿ ಆ ಹೆಸರಿನ ಯಾವುದೇ ಗೋಸಂರಕ್ಷಣಾ ಸಂಘಟನೆ ಇಲ್ಲ. ಘಟನೆ ಕುರಿತಾಗಿ ಬರುತ್ತಿರುವ ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಆಗ್ರಾದ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ.

ಇದಲ್ಲದೆ ಗುಂಡಿನ ದಾಳಿಯಲ್ಲಿ ಗಾಯಗೊಂಡ ಗುಲ್ಫಾಮ್‌ನ ಸಹೋದರ ಸೈಫ್, ಗುಂಡಿಕ್ಕುವ ಮೊದಲು ನಮ್ಮ ಹೆಸರು ಅಥವಾ ಧರ್ಮವನ್ನು ಯಾರೂ ಕೇಳಲಿಲ್ಲ ಎಂದು ದೃಢಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಊಟ ಚೆನ್ನಾಗಿರಲಿಲ್ಲ ಎಂಬ ವಿಚಾರಕ್ಕೆ ಸಂತ್ರಸ್ತ ಮತ್ತು ಅಪರಾಧಿಗಳ ನಡುವೆ ಜಗಳ ನಡೆದಿದೆ. ಮೂವರು ಆರೋಪಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 101 (ಕೊಲೆ) ಮತ್ತು 109ರ (ಕೊಲೆಗೆ ಯತ್ನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಆರು ಪೊಲೀಸ್ ತಂಡಗಳು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಗಡಿಯಲ್ಲಿನ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುತ್ತಿರುವುದಾಗಿ ತಾಜ್‌ಗಂಜ್‌ ಸಹಾಯಕ ಪೊಲೀಸ್ ಆಯುಕ್ತ ಅರೀಬ್ ಅಹ್ಮದ್ ಹೇಳಿದ್ದಾರೆ.

ಇದಲ್ಲದೆ ಕೊಲೆಗೆ ತಾವೇ ಕಾರಣ ಎಂದು ವೀಡಿಯೊದಲ್ಲಿ ಹೇಳಿದ್ದ ಇಬ್ಬರನ್ನು ಕೂಡ ಗುರುತಿಸಲಾಗಿದ್ದು, ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನೋರ್ವನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅರೀಬ್ ಅಹ್ಮದ್ ಹೇಳಿದ್ದಾರೆ.

ಸೈಬರ್ ಸೆಲ್ ಎಸಿಪಿ ಸುಕನ್ಯಾ ಶರ್ಮಾ ಪ್ರತಿಕ್ರಿಯಿಸಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಪಹಲ್ಗಾಮ್ ಘಟನೆ ಕುರಿತು ಪ್ರತೀಕಾರದ ಬಗ್ಗೆ ಪ್ರಚಾರ ಮಾಡದಂತೆ ಎಚ್ಚರಿಸಿದ್ದಾರೆ. ಇದು ಕೋಮು ಉದ್ವಿಗ್ನತೆ ಉಂಟುಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ. ಸತ್ಯವನ್ನು ಪರಿಶೀಲಿಸದೆ ವದಂತಿ ಹರಡುವವರ ವಿರುದ್ಧ ಐಟಿ ಕಾಯ್ದೆಯಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News