ಹೈದರಾಬಾದ್: ಪುತ್ರಿಯರ ಕಾಲೇಜು ಶುಲ್ಕ ಭರಿಸಲು ಹಣಕ್ಕಾಗಿ ಲೈಂಗಿಕ ಕ್ರಿಯೆಯ ವೀಡಿಯೊ ಮಾರಾಟ : ದಂಪತಿ ಬಂಧನ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಮೊಬೈಲ್ ಆ್ಯಪ್‌ನಲ್ಲಿ ತಮ್ಮ ಲೈಂಗಿಕ ಕ್ರಿಯೆಗಳನ್ನು ನೇರವಾಗಿ ಪ್ರಸಾರಿಸುತ್ತಿದ್ದ ಆರೋಪದಲ್ಲಿ ದಂಪತಿಯನ್ನು ಹೈದರಾಬಾದ್ ಪೋಲಿಸರು ಬಂಧಿಸಿದ್ದಾರೆ. ದಂಪತಿಗೆ ಹಣದ ತೀವ್ರ ಅಗತ್ಯವಿತ್ತು ಮತ್ತು ಸುಲಭವಾಗಿ ದುಡ್ಡು ಗಳಿಸಲು ಇಂತಹ ಕೃತ್ಯಕ್ಕೆ ಇಳಿದಿದ್ದರು ಎಂದು ಪೋಲಿಸರು ಶುಕ್ರವಾರ ತಿಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿನಿಯರಾಗಿರುವ ತಮ್ಮ ಇಬ್ಬರು ಪುತ್ರಿಯರ ಕಾಲೇಜು ಶುಲ್ಕವನ್ನು ಭರಿಸಲು ದಂಪತಿಗೆ ಸಾಧ್ಯವಿರಲಿಲ್ಲ, ಓರ್ವ ಪುತ್ರಿ ಎರಡನೇ ವರ್ಷದ ಬಿ.ಟೆಕ್ ಓದುತ್ತಿದ್ದರೆ ಇನ್ನೋರ್ವಳು ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ 470ರಲ್ಲಿ 468 ಅಂಕಗಳನ್ನು ಗಳಿಸಿದ್ದು,ಕಾಲೇಜಿಗೆ ಸೇರಲು ಸಜ್ಜಾಗುತ್ತಿದ್ದಾಳೆ.
ಅಲ್ಲದೆ ವೃತ್ತಿಯಿಂದ ಆಟೋ ಚಾಲಕನಾಗಿರುವ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದು,ವೈದ್ಯಕೀಯ ಚಿಕಿತ್ಸೆಗೆ ವೆಚ್ಚ ಮಾಡುವ ಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ ಎಂದು ಪೋಲಿಸರು ಹೇಳಿದರು.
ಖಚಿತ ಮಾಹಿತಿಯ ಮೇರೆಗೆ ಗುರುವಾರ ಅಂಬರಪೇಟ್‌ನ ಮಲ್ಲಿಕಾರ್ಜುನ ನಗರದಲ್ಲಿ ದಂಪತಿಯನ್ನು ಬಂಧಿಸಿದ ಪೋಲಿಸರು, ಹೈಡೆಫಿನಿಷನ್(ಎಚ್‌ಡಿ) ಕ್ಯಾಮೆರಾಗಳು ಸೇರಿದಂತೆ ಹಲವಾರು ಉಪಕರಣಗಳನ್ನು ಅವರ ಮನೆಯಿಂದ ವಶಪಡಿಸಿಕೊಂಡಿದ್ದಾರೆ.
ದಂಪತಿ ಯುವಜನರೇ ಹೆಚ್ಚಿದ್ದ ಆ್ಯಪ್ ಬಳಕೆದಾರರಿಗೆ ಲೈವ್ ವೀಡಿಯೊವನ್ನು 2,000 ರೂ.ಗೆ ಮತ್ತು ರೆಕಾರ್ಡ್ ಮಾಡಿದ ತುಣುಕನ್ನು 500ರೂ.ಗೆ ಮಾರಾಟ ಮಾಡುತ್ತಿದ್ದರು. ಆಟೋ ಚಾಲಕನಾಗಿ ವ್ಯಕ್ತಿಯ ಗಳಿಕೆಗಿಂತ ಹೆಚ್ಚಿನ ಹಣವನ್ನು ದಂಪತಿ ಈ ದಂಧೆಯಿಂದ ಗಳಿಸಿದ್ದರು ಎಂದು ಪೋಲಿಸರು ತಿಳಿಸಿದರು. ಇದಕ್ಕಾಗಿ ಅವರು ಎಚ್‌ಡಿ ಕ್ಯಾಮೆರಾಗಳನ್ನು ಬಳಸುತ್ತಿದ್ದರು ಮತ್ತು ಲೈಂಗಿಕ ಕ್ರಿಯೆಯ ಸಮಯದಲ್ಲಿ ತಮ್ಮ ಗುರುತನ್ನು ಮರೆಮಾಚಲು ಮಾಸ್ಕ್‌ಗಳನ್ನು ಧರಿಸುತ್ತಿದ್ದರು ಎಂದೂ ಪೋಲಿಸರು ತಿಳಿಸಿದರು.
ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದಂಪತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು,ತನಿಖೆಯು ಪ್ರಗತಿಯಲ್ಲಿದೆ. ಅವರಿಂದ ವೀಡಿಯೊಗಳನ್ನು ಖರೀದಿಸಿದವರಿಗೂ ನೋಟಿಸ್‌ಗಳನ್ನು ಹೊರಡಿಸಲಾಗಿದೆ ಎಂದರು.