ಹೈದರಾಬಾದ್ ನ 4 ಸ್ಥಳಗಳಿಗೆ ಬಾಂಬ್ ಬೆದರಿಕೆ
PC : NDTV
ಹೈದರಾಬಾದ್: ಹೈದರಾಬಾದ್ ನ ನಗರ ಸಿವಿಲ್ ನ್ಯಾಯಾಲಯಗಳು, ರಾಜ ಭವನ ಹಾಗೂ ಇತರ ಎರಡು ಪ್ರದೇಶಗಳಿಗೆ ಮಂಗಳವಾರ ಬಾಂಬ್ ಬೆದರಿಕೆ ಒಡ್ಡಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಈ ಸ್ಥಳಗಳಲ್ಲಿ ಕೂಲಂಕಷ ತನಿಖೆ ನಡೆಸಿದರು.
ಹಳೆ ನಗರದಲ್ಲಿರುವ ನಗರ ಸಿವಿಲ್ ನ್ಯಾಯಾಲಯ, ರಾಜ ಭವನ, ಜಿಮ್ಕಾನಾ ಕ್ಲಬ್ ಹಾಗೂ ಸಿಕಂದರಾಬಾದ್ ಸಿವಿಲ್ ನ್ಯಾಯಾಲಯದಲ್ಲಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಒಡ್ಡಿದ ಇಮೇಲ್ ಸಂದೇಶ ಬಂದ ಬಳಿಕ ಪೊಲೀಸರು ಜಾಗೃತರಾದರು.
ಈ ಸ್ಥಳಗಳಲ್ಲಿ ಆರ್ಡಿಎಕ್ಸ್ ಮೂಲದ ಸುಧಾರಿತ ಸ್ಫೋಟ ಸಾಧನ (ಐಇಡಿ)ವನ್ನು ಇರಿಸಲಾಗಿದೆ ಎಂದು ಹಳೆ ನಗರದಲ್ಲಿರುವ ನಗರ ಸಿವಿಲ್ ನ್ಯಾಯಾಲಯ ಇಮೇಲ್ ಸ್ವೀಕರಿಸಿತ್ತು ಎಂದು ವರದಿಯಾಗಿದೆ.
ಕೂಡಲೇ ಜಾಗೃತರಾದ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಹಾಗೂ ಸ್ನಿಫರ್ ನಾಯಿಗಳ ನೆರವಿನಿಂದ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಪೊಲೀಸರಿಗೆ ಯಾವುದೇ ರೀತಿಯ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇಮೇಲ್ ನ ಮೂಲ ಹಾಗೂ ಆತಂಕವನ್ನು ಹಬ್ಬಿಸಿರುವುದಕ್ಕೆ ಕಾರಣನಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.