ಹೈದರಾಬಾದ್ | ಶೋಭಾಯಾತ್ರೆಯ ವೇಳೆ ವಿದ್ಯುತ್ ತಂತಿಗೆ ತಾಗಿದ ರಥ: ಐವರು ಮೃತ್ಯು; ನಾಲ್ವರಿಗೆ ಗಾಯ
PC : X
ಹೈದರಾಬಾದ್: ಶ್ರೀಕೃಷ್ಣ ಶೋಭಾಯಾತ್ರೆಯ ವೇಳೆ ದೇವಾಲಯದ ರಥ ವಿದ್ಯುತ್ ಕಂಬಿಗೆ ತಾಗಿ, ವಿದ್ಯುದಾಘಾತದಿಂದ ಐವರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಉಪ್ಪಳ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಾಥಪುರಂನಲ್ಲಿ ರವಿವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ನಿಂತಿದ್ದ ರಥವನ್ನು ಮುಂದಕ್ಕೆ ನೂಕಿದಾಗ ತಲೆಯ ಮೇಲಿನ ವಿದ್ಯುತ್ ತಂತಿಯ ಸಂಪರ್ಕಕ್ಕೆ ರಥ ಬಂದಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮೃತರನ್ನು ಕೃಷ್ಣ (21), ಶ್ರೀಕಾಂತ ರೆಡ್ಡಿ (35), ಸುರೇಶ್ ಯಾದವ್ (34), ರುದ್ರ ವಿಕಾಸ್ (39) ಹಾಗೂ ರಾಜೇಂದ್ರ ರೆಡ್ಡಿ (45) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಶ್ರೀ ಕೃಷ್ಣ ಶೋಭಾಯಾತ್ರೆ ಮೆರವಣಿಗೆ ಮುಕ್ತಾಯದ ಹಂತ ತಲುಪಿತ್ತು. ಆಗ ದೇವಾಲಯದ ರಥ ಹೊತ್ತೊಯ್ಯುತ್ತಿದ್ದ ವಾಹನವು ಮಾರ್ಗಮಧ್ಯದಲ್ಲೇ ಸ್ಥಗಿತಗೊಂಡಿದೆ. ಈ ವೇಳೆ ಸುಮಾರು 10 ಮಂದಿ ಭಕ್ತಾದಿಗಳು ವಾಹನವನ್ನು ಮುಂದಕ್ಕೆ ತಳ್ಳಲು ಪ್ರಯತ್ನಿಸಿದ್ದಾರೆ. ಆಗ ರಥವು ತಲೆಯ ಮೇಲಿನ ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಬಂದಿದ್ದರಿಂದ ಈ ಅವಘಡ ನಡೆದಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಪೈಕಿ ಕೆಲವರನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಮೃತ ದೇಹಗಳನ್ನು ಗಾಂಧಿ ಆಸ್ಪತ್ರೆಗೆ ಸಾಗಿಸಿರುವ ಪೊಲೀಸರು, ಪ್ರಕರಣದ ಕುರಿತು ತನಿಖೆ ಕೈಗೆತ್ತಿಕೊಂಡಿದ್ದಾರೆ.