×
Ad

ಹೈದರಾಬಾದ್ | ಶಿವ ದೇವಾಲಯದಲ್ಲಿ ಮಾಂಸದ ತುಂಡು ಪತ್ತೆ ಬಳಿಕ ಉದ್ವಿಗ್ನತೆ : ತನಿಖೆ ವೇಳೆ ಅಪರಾಧಿ ಬೆಕ್ಕು ಎಂದು ಬಯಲು!

Update: 2025-02-13 10:38 IST

Photo |instagram

ಹೈದರಾಬಾದ್ : ಹೈದರಾಬಾದ್‌ನ ತಪ್ಪಚಬುತ್ರದ ಹನುಮಾನ್ ದೇವಸ್ಥಾನದ ಆವರಣದಲ್ಲಿನ ಶಿವ ದೇವಾಲಯದಲ್ಲಿ ಮಾಂಸದ ತುಂಡು ಪತ್ತೆಯಾಗಿದ್ದು, ಬುಧವಾರ ಉದ್ವಿಗ್ನತೆಗೆ ಕಾರಣವಾಗಿದೆ.

ತಪ್ಪಚಬುತ್ರ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಾನ್ ದೇವಸ್ಥಾನದ ಆವರಣದ ಶಿವ ದೇವಾಲಯದಲ್ಲಿ ಮಾಂಸದ ತುಂಡು ಪತ್ತೆಯಾಗಿತ್ತು. ಬುಧವಾರ ಬೆಳಗ್ಗೆ ಈ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇದು ಸೂಕ್ಷ್ಮ ವಿಷಯವಾದ್ದರಿಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. 250 ಗ್ರಾಂ ತೂಕದ ಮಾಂಸದ ತುಂಡನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ದೇವಸ್ಥಾನದ ಸಮಿತಿಯ ಸದಸ್ಯರೋರ್ವರು ಮಾತನಾಡಿ, ಶಿವಲಿಂಗದ ಬಳಿ ಯಾರೋ ಮಾಂಸವನ್ನು ಎಸೆದಿದ್ದಾರೆ ಎಂದು ಹೇಳಿಕೆ ನೀಡಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಸ್ಥಳೀಯರು ಮತ್ತು ಭಾರತೀಯ ಜನತಾ ಯುವ ಮೋರ್ಚಾ ಸದಸ್ಯರು ದೇವಸ್ಥಾನದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು ಮತ್ತು ಘಟನೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಈ ಕುರಿತು ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ಈ ಕುರಿತು ತನಿಖೆಯ ಭಾಗವಾಗಿ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನೈಜ ಆರೋಪಿ ಪತ್ತೆಯಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಬೆಕ್ಕು ಮಾಂಸದ ತುಂಡನ್ನು ಕಚ್ಚಿಕೊಂಡು ದೇವಸ್ಥಾನದ ಆವರಣಕ್ಕೆ ತೆರಳುತ್ತಿರುವುದು ಕಂಡು ಬಂದಿದೆ.

ಈ ಕುರಿತು ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ʼದೇವಸ್ಥಾನದ ಶಿವಲಿಂಗದ ಹಿಂದೆ ಮಾಂಸದ ತುಂಡನ್ನು ಇರಿಸಿರುವುದು ಬೆಕ್ಕು ಎಂದು ತಿಳಿಸಿದ್ದಾರೆ. ದೇವಾಲಯದ ಬಳಿಯಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಬೆಕ್ಕು ಬಾಯಿಯಲ್ಲಿ ಮಾಂಸವನ್ನು ಕಚ್ಚಿಕೊಂಡು ಬರುವುದು ಸ್ಪಷ್ಟವಾಗಿ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವದಂತಿಗಳು ಅಥವಾ ತಪ್ಪು ಮಾಹಿತಿಗಳನ್ನು ಹರಡಬೇಡಿʼ ಎಂದು ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News