ಶೀಘ್ರವೇ ʼಹೈಡ್ರೋಜನ್ ಬಾಂಬ್ʼ: ʼವೋಟ್ ಚೋರಿʼ ಬಗ್ಗೆ ಹೊಸ ಮಾಹಿತಿಗಳ ಸುಳಿವು ನೀಡಿದ ರಾಹುಲ್ ಗಾಂಧಿ
"ಮೋದಿಗೆ ಮುಖವನ್ನು ತೋರಿಸಲೂ ಸಾಧ್ಯವಾಗದು"
Photo credit: PTI
ಪಾಟ್ನಾ: ‘ವೋಟ್ ಚೋರಿ’ ಕುರಿತು ಹೊಸ ಮಾಹಿತಿಗಳ ‘ಹೈಡ್ರೋಜನ್ ಬಾಂಬ್’ನ್ನು ಪಕ್ಷವು ಶೀಘ್ರದಲ್ಲಿಯೇ ಸ್ಫೋಟಿಸಲಿದೆ ಮತ್ತು ಅದರ ಬಳಿಕ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶಕ್ಕೆ ತನ್ನ ಮುಖವನ್ನು ತೋರಿಸಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸೋಮವಾರ ಹೇಳಿದರು.
ತನ್ನ ‘ಮತದಾರರ ಅಧಿಕಾರ ಯಾತ್ರೆ’ಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಬಿಹಾರ ಕ್ರಾಂತಿಕಾರಿ ರಾಜ್ಯವಾಗಿದೆ ಮತ್ತು ಅದು ದೇಶಕ್ಕೆ ಸಂದೇಶವೊಂದನ್ನು ನೀಡಿದೆ ಎಂದರು.
‘ಬಿಜೆಪಿಯು ಸಂವಿಧಾನದ ಕಗ್ಗೊಲೆ ಮಾಡಲು ನಾವು ಅವಕಾಶವನ್ನು ನೀಡುವುದಿಲ್ಲ ಮತ್ತು ಅದಕ್ಕಾಗಿಯೇ ನಾವು ಯಾತ್ರೆಯನ್ನು ನಡೆಸಿದ್ದೇವೆ. ನಮಗೆ ಭಾರೀ ಜನಸ್ಪಂದನ ಲಭಿಸಿದೆ. ಜನರು ಭಾರೀ ಸಂಖ್ಯೆಯಲ್ಲಿ ಹೊರಬಂದು ‘ವೋಟ್ ಚೋರ್ ಗದ್ದಿ ಛೋಡ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ’ ಎಂದ ರಾಹುಲ್, ‘ನಾನು ಬಿಜೆಪಿ ಜನರಿಗೆ ಹೇಳಲು ಬಯಸುತ್ತೇನೆ. ಆ್ಯಟಂ ಬಾಂಬ್‌ಗಿಂತ ದೊಡ್ಡದೇನಾದರ ಬಗ್ಗೆ ಕೇಳಿದ್ದೀರಾ? ಅದು ಹೈಡ್ರೋಜನ್ ಬಾಂಬ್. ಬಿಜೆಪಿಗರೇ ಸಿದ್ಧರಾಗಿ, ಹೈಡ್ರೋಜನ್ ಬಾಂಬ್ ಬರುತ್ತಿದೆ. ಜನರು ಶೀಘ್ರವೇ ವೋಟ್ ಚೋರಿಯ ವಾಸ್ತವತೆಯನ್ನು ಕಂಡುಕೊಳ್ಳಲಿದ್ದಾರೆ’ ಎಂದು ಹೇಳಿದರು.
‘ಮುಂಬರುವ ದಿನಗಳಲ್ಲಿ ಹೈಡ್ರೋಜನ್ ಬಾಂಬ್ ಬಂದ ಬಳಿಕ ಮೋದಿಯವರಿಗೆ ದೇಶಕ್ಕೆ ತನ್ನ ಮುಖವನ್ನು ತೋರಿಸಲೂ ಸಾಧ್ಯವಾಗುವುದಿಲ್ಲ ಎಂದು ನಾನು ನಿಮಗೆ ಖಾತರಿ ನೀಡುತ್ತೇನೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಮತಗಳನ್ನು ಕದಿಯಲಾಗಿತ್ತು ಮತ್ತು ಬಳಿಕ ಕರ್ನಾಟಕದ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ಹೇಗೆ ವೋಟ್ ಚೋರಿ ಮಾಡಲಾಗಿತ್ತು ಎನ್ನುವುದನ್ನು ನಮ್ಮ ಪಕ್ಷವು ಪುರಾವೆಗಳ ಸಹಿತ ತೋರಿಸಿದೆ’ ಎಂದರು.
‘ನಾನು ಬಿಹಾರದ ಯುವಜನತೆಗೆ ಹೇಳಲು ಬಯಸುತ್ತೇನೆ. ವೋಟ್ ಚೋರಿ ಎಂದರೆ ಅದು ಹಕ್ಕುಗಳ ಕಳವು, ಪ್ರಜಾಪ್ರಭುತ್ವದ ಕಳವು,ಉದ್ಯೋಗದ ಕಳವು. ಅವರು ನಿಮ್ಮ ಪಡಿತರ ಚೀಟಿ ಮತ್ತು ಇತರ ಹಕ್ಕುಗಳನ್ನು ಕಿತ್ತುಕೊಳ್ಳಲಿದ್ದಾರೆ ’ಎಂದರು.