×
Ad

ಪಾಕಿಸ್ತಾನದಲ್ಲಿ ನನಗ್ಯಾರೂ ದಿಕ್ಕಿಲ್ಲ, ದಯವಿಟ್ಟು ಇಲ್ಲೇ ಇರಲು ಬಿಡಿ: 35 ವರ್ಷಗಳಿಂದ ಭಾರತದಲ್ಲಿರುವ ಮಹಿಳೆಯ ಅಳಲು

Update: 2025-04-28 21:29 IST

PC : NDTV 

ಭುವನೇಶ್ವರ: ಕಳೆದ 35 ವರ್ಷಗಳಿಂದಲೂ ಭಾರತದಲ್ಲಿ ವಾಸವಾಗಿರುವ ಪಾಕಿಸ್ತಾನಿ ಪ್ರಜೆ ಶಾರದಾ ಬಾಯಿಗೆ ತಕ್ಷಣವೇ ದೇಶದಿಂದ ನಿರ್ಗಮಿಸುವಂತೆ ಒಡಿಶಾ ಪೋಲಿಸರು ಆದೇಶಿಸಿದ್ದಾರೆ. ಶಾರದಾ ಬಾಯಿಯ ವೀಸಾ ರದ್ದುಗೊಂಡಿದೆ ಮತ್ತು ವಿಳಂಬಿಸದೆ ಪಾಕಿಸ್ತಾನಕ್ಕೆ ಮರಳುವಂತೆ ಅವರಿಗೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಆದೇಶವನ್ನು ಪಾಲಿಸದಿದ್ದರೆ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಪೋಲಿಸರು ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಪೋಲಿಸ್ ಕ್ರಮವು ಪಹಲ್ಗಾಮ್ ನರಮೇಧದ ಬಳಿಕ ಭಾರತವು ಪಾಕ್ ವಿರುದ್ಧ ಕೈಗೊಂಡಿರುವ ಸರಣಿ ಕ್ರಮಗಳ ಭಾಗವಾಗಿದೆ.

ಶಾರದಾ ಬಾಯಿ ಹಲವಾರು ವರ್ಷಗಳ ಹಿಂದೆಯೇ ಬೋಲಂಗೀರ್ ನ ಹಿಂದು ಕುಟುಂಬದ ಮಹೇಶ ಕುಕ್ರೇಜಾರನ್ನು ಮದುವೆಯಾಗಿದ್ದು, ಅವರ ಪುತ್ರ ಮತ್ತು ಪುತ್ರಿ ಭಾರತೀಯ ಪ್ರಜೆಗಳಾಗಿದ್ದಾರೆ. ಮತದಾರರ ಗುರುತಿನ ಚೀಟಿ ಸೇರಿದಂತೆ ಎಲ್ಲ ಪ್ರಮುಖ ದಾಖಲೆಗಳನ್ನು ಹೊಂದಿದ್ದರೂ ಅವರಿಗೆ ಈವರೆಗೆ ಭಾರತೀಯ ಪೌರತ್ವ ಲಭಿಸಿಲ್ಲ.

ತನ್ನನ್ನು ತನ್ನ ಕುಟುಂಬದಿಂದ ಬೇರ್ಪಡಿಸದಂತೆ ಅವರು ಸರಕಾರವನ್ನು ಕೋರಿಕೊಂಡಿದ್ದಾರೆ.

ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ತನ್ನ ಮನೆಯಾಗಿರುವ ಭಾರತದಲ್ಲಿ ತನ್ನ ವಾಸವನ್ನು ಮುಂದುವರಿಸಲು ಅವಕಾಶ ನೀಡಿ ಎಂದು ಶಾರದಾ ಬಾಯಿ ಕೈಮುಗಿದು ಬೇಡಿಕೊಂಡಿದ್ದಾರೆ.

‘ನಾನು ಮೊದಲು ಕೋರಾಪತ್ನಲ್ಲಿದ್ದು, ನಂತರ ಬೋಲಂಗೀರ್ಗೆ ಬಂದಿದ್ದೆ. ಪಾಕಿಸ್ತಾನದಲ್ಲಿ ನನಗ್ಯಾರೂ ದಿಕ್ಕಿಲ್ಲ, ನನ್ನ ಪಾಸ್ಪೋರ್ಟ್ ಕೂಡ ತುಂಬ ಹಳೆಯದಾಗಿದೆ. ದಯವಿಟ್ಟು ನನಗೆ ಇಲ್ಲಿಯೇ ಬದುಕಲು ಅವಕಾಶ ನೀಡಿ ಎಂದು ಸರಕಾರವನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ. ನನಗೆ ಬೆಳೆದ ಮಕ್ಕಳಿದ್ದಾರೆ, ಮೊಮ್ಮಕ್ಕಳಿದ್ದಾರೆ. ನಾನು ಭಾರತೀಯಳಾಗಿ ಇಲ್ಲಿಯೇ ಬದುಕಲು ಬಯಸಿದ್ದೇನೆ ’ಎಂದು ಅವರು ಅಳಲು ತೋಡಿಕೊಂಡರು.

ಸರಕಾರಕ್ಕೆ ಅವರ ಮನವಿಯು ಹಲವರ ಹೃದಯಗಳನ್ನು ತಟ್ಟಿದೆ, ಆದರೆ ಬೋಲಂಗೀರ್ ಪೋಲಿಸರು ತಾವು ಕಾನೂನಿನಡಿ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಆಕೆ ತುಂಬ ಉದ್ವಿಗ್ನರಾಗಿದ್ದಾರೆ. ಸರಕಾರ ಏನು ನಿರ್ಧರಿಸುತ್ತದೆ ಎನ್ನುವ ಕುತೂಹಲ ಕೆರಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News