ನಾನು ಕೂಡಾ ಲೈಂಗಿಕ ದೌರ್ಜನ್ಯದ ಬಲಿಪಶು: ಬಿಜೆಪಿ ನಾಯಕಿ ಖುಷ್ಬೂ
ಖುಷ್ಬೂ ಸುಂದರ್ | PC : ANI
ಚೆನ್ನೈ: ಮಲಯಾಳಂ ಚಿತ್ರರಂಗದ ಕೆಲವು ಜನಪ್ರಿಯ ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ದೇಶಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಜನಪ್ರಿಯ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಸಂತ್ರಸ್ತ ನಟಿಯರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣವೊಂದರಲ್ಲಿ ಈಬಗ್ಗೆ ಪೋಸ್ಟ್ ಮಾಡಿಉರವ ಅವರು ತಾನು ತಂದೆಯಿಂದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ.
ಪ್ರತಿಯೊಂದು ಕ್ಷೇತ್ರದಲ್ಲಿಯೂ ಲೈಂಗಿಕ ಕಿರುಕುಳ ಹಾಗೂ ವೃತ್ತಿ ಜೀವನದ ಪ್ರಗತಿಗಾಗಿ ರಾಜಿ ಮಾಡಿಕೊಳ್ಳಬೇಕೆಂಬ ಬೇಡಿಕೆಯು ಅಸ್ತಿತ್ವದಲ್ಲಿದೆ. ಆದರೆ ಮಹಿಳೆಯರು ಯಾಕೆ ಈ ಪೀಡನೆಗೆ ಒಳಗಾಗಬೇಕು ಎಂದವರು ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ತಾವು ಎದುರಿಸಿದ ದೌರ್ಜನ್ಯಗಳ ಬಗ್ಗೆ ಮಲಯಾಳಂ ಚಿತ್ರರಂಗದ ಮಹಿಳೆಯರು ದಿಟ್ಟವಾಗಿ ಮುಂದೆ ಬಂದು ಮಾತನಾಡಿರುವುದನ್ನು ಶ್ಲಾಘಿಸಿದ ಖುಶ್ಬೂ ಅವರು, ಇಂತಹ ಕಿರುಕುಳಗಳನ್ನು ಕಿತ್ತೊಗೆಯಬೇಕಾದರೆ, ಹೇಮಾ ಸಮಿತಿಯವುಗಳ ಬಹಳಷ್ಟು ಅಗತ್ಯವಿದೆ ಎಂದವರು ಹೇಳಿದ್ದಾರೆ.
ತಾನು ಬಾಲ್ಯದಲ್ಲಿ ತನ್ನ ತಂದೆಯಿಂದ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆಯೂ ಖುಷ್ಬೂ ತನ್ನ ಸುದೀರ್ಘ ಪೋಸ್ಟ್ ಏಹಳಿಕೊಂಡಿದ್ದಾರೆ.
ನನ್ನ ತಂದೆಯೆಸಗಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಲು ಇಷ್ಟೊಂದು ಸಮಯ ಯಾಕೆ ತೆಗೆದುಕೊಂಡಿರಿ ಎಂದು ಕೆಲವರು ನನ್ನಲ್ಲಿ ಕೇಳಿದ್ದಾರೆ. ಈ ಬಗ್ಗೆ ಮೊದಲೇ ಮಾತನಾಡಬೇಕಿತ್ತೆಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನನಗಾಗಿದ್ದುದು, ನನ್ನ ವೃತ್ತಿ ಜೀವನದ ನಿರ್ಮಾಣಕ್ಕಾಗಿ ಮಾಡಿಕೊಂಡ ರಾಜಿಯಲ್ಲವಾಗಿದ್ದರಿಂದ ನಾನದನ್ನು ಬಹಿರಂಗಪಡಿಸಿರಲಿಲ್ಲ. ಒಂದು ವೇಳೆ ನಾನು ಬಿದ್ದಲ್ಲಿ ತನ್ನ ಬಲಿಷ್ಠವಾದ ಕೈಗಳಿಂದ ಕಾಪಾಡಬೆಕಾಗಿದ್ದಂತಹ ವ್ಯಕ್ತಿಯಿಂದಲೇ ನಾನು ಲೈಂಗಿಕ ದೌರ್ಜನ್ಯಕ್ಕೊಳಗಾದೆ ಎಂದು ಆಕೆ ಹೇಳಿದ್ದಾರೆ.