×
Ad

Bangladeshದ ಮನವಿಗೆ ICC ತಿರಸ್ಕಾರ; ಭಾರತದಿಂದ ಪಂದ್ಯ ಸ್ಥಳಾಂತರಕ್ಕೆ ನಿರಾಕರಣೆ

Update: 2026-01-07 12:01 IST

Photo| ಜಯ್ ಶಾ

ಹೊಸದಿಲ್ಲಿ,ಜ.7: ಮುಂಬರುವ ಐಸಿಸಿ ಟಿ20 ವಿಶ್ವಕಪ್‌–2026ರಲ್ಲಿ ಭಾರತದಲ್ಲಿ ನಡೆಯಲಿರುವ ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಸಲ್ಲಿಸಿದ್ದ ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದೆ ಎಂದು ವರದಿಗಳು ತಿಳಿಸಿವೆ.

ಮಂಗಳವಾರ ನಡೆದ ವರ್ಚುವಲ್ ಸಭೆಯಲ್ಲಿ, ಜಯ್ ಶಾ ನೇತೃತ್ವದ ಐಸಿಸಿ ಆಡಳಿತ ಮಂಡಳಿ, ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಬಿಸಿಬಿಯ ಮನವಿಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಟಿ20 ವಿಶ್ವಕಪ್ ಪಂದ್ಯಗಳಿಗಾಗಿ ಬಾಂಗ್ಲಾದೇಶದ ಹಿರಿಯ ಪುರುಷರ ರಾಷ್ಟ್ರೀಯ ತಂಡವು ಭಾರತಕ್ಕೆ ಪ್ರಯಾಣಿಸಲೇಬೇಕು. ಇಲ್ಲವಾದಲ್ಲಿ ಅಂಕಗಳನ್ನು ಕಳೆದುಕೊಳ್ಳುವ ಅಪಾಯ ಎದುರಾಗಲಿದೆ ಎಂದು ಐಸಿಸಿ ಬಿಸಿಬಿಗೆ ಸ್ಪಷ್ಟಪಡಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ANI ವರದಿ ಮಾಡಿದೆ.

ವರ್ಚುವಲ್ ಸಭೆಯ ತೀರ್ಮಾನ ಕುರಿತು ಐಸಿಸಿ ಅಥವಾ ಬಿಸಿಬಿ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಟಿ20 ವಿಶ್ವಕಪ್‌–2026ರಲ್ಲಿ ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಸಾಧ್ಯತೆ ಕುರಿತು ಪರಿಗಣಿಸುವಂತೆ ಬಿಸಿಬಿ ಪತ್ರ ಬರೆದ ನಂತರವೇ ಈ ವರ್ಚುವಲ್ ಸಭೆ ಆಯೋಜಿಸಲಾಗಿತ್ತು ಎಂದು ESPNcricinfo ವರದಿ ತಿಳಿಸಿದೆ.

ಈ ನಡುವೆ, ಈ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್‌ (IPL) ಟೂರ್ನಿಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ವೇಗಿ ಮುಸ್ತಾಫಿಝುರ್ರೆಹಮಾನ್ ಅವರನ್ನು ಬಿಡುಗಡೆ ಮಾಡಿರುವುದಕ್ಕೆ ಬಿಸಿಬಿ ಅಸಮಾಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು ನಿಷೇಧಿಸುವ ನಿರ್ಧಾರವನ್ನೂ ಕೈಗೊಂಡಿದೆ ಎಂದು ವರದಿಯಾಗಿದೆ.

ಟಿ20 ವಿಶ್ವಕಪ್‌–2026ನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಫೆಬ್ರವರಿ 7ರಿಂದ ಮಾರ್ಚ್ 8ರವರೆಗೆ ಆಯೋಜಿಸಲಿವೆ. ಗ್ರೂಪ್ ‘ಸಿ’ಯಲ್ಲಿ ಸ್ಥಾನ ಪಡೆದಿರುವ ಬಾಂಗ್ಲಾದೇಶ, ಫೆಬ್ರವರಿ 7ರಂದು ವೆಸ್ಟ್ ಇಂಡೀಸ್ ವಿರುದ್ಧ, ಫೆಬ್ರವರಿ 9ರಂದು ಇಟಲಿ ವಿರುದ್ಧ ಹಾಗೂ ಫೆಬ್ರವರಿ 14ರಂದು ಇಂಗ್ಲೆಂಡ್ ವಿರುದ್ಧ ಕೋಲ್ಕತ್ತಾದಲ್ಲಿ ಸತತ ಮೂರು ಪಂದ್ಯಗಳನ್ನು ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News