ಬಿಹಾರ SIR | ಮತದಾರ ಪಟ್ಟಿಯಿಂದ ಸಾಮೂಹಿಕವಾಗಿ ಹೊರಗಿಟ್ಟರೆ, ನಾವು ಮಧ್ಯಪ್ರವೇಶಿಸುತ್ತೇವೆ: ಸುಪ್ರೀಂ ಕೋರ್ಟ್ ಎಚ್ಚರಿಕೆ
Photo credit: PTI
ಹೊಸದಿಲ್ಲಿ: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಿನ್ನೆಲೆಯಲ್ಲಿ 65 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡುವ ಆತಂಕದ ಮಧ್ಯೆ, “ಸಾಮೂಹಿಕವಾಗಿ ಯಾರನ್ನಾದರೂ ಮತದಾರರ ಪಟ್ಟಿಯಿಂದ ಹೊರಗಿಟ್ಟರೆ, ನಾವು ತಕ್ಷಣ ಮಧ್ಯಪ್ರವೇಶಿಸುತ್ತೇವೆ,” ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿಯವರ ಅವರಿದ್ದ ಪೀಠವು ಮಂಗಳವಾರ ಈ ಹೇಳಿಕೆ ನೀಡಿದೆ.
ಬಿಹಾರ SIR ವಿರುದ್ಧ ಸಲ್ಲಿಸಲಾಗಿರುವ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಆಗಸ್ಟ್ 12 ಮತ್ತು 13ರಂದು ವಿಚಾರಣೆಗೆ ಪಟ್ಟಿ ಮಾಡಿದೆ. ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್, “65 ಲಕ್ಷ ಮತದಾರರು ಹೆಸರುಗಳನ್ನು ಪರಿಷ್ಕರಣೆ ನಮೂನೆಗೆ ಸಲ್ಲಿಸಿಲ್ಲ ಎಂಬ ಚುನಾವಣಾ ಆಯೋಗದ ಹೇಳಿಕೆ ಶಂಕೆಗೆ ಕಾರಣವಾಗಿದೆ. ಈ ಪೈಕಿ ಅನೇಕರು ಸತ್ತಿದ್ದಾರೆ ಅಥವಾ ಬೇರೆ ರಾಜ್ಯಗಳಿಗೆ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ವ್ಯಕ್ತಿಗಳು ಹೊಸತಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಮೂರ್ತಿ ಸೂರ್ಯ ಕಾಂತ್ ಮಾತನಾಡುತ್ತಾ, “ಭಾರತದ ಚುನಾವಣಾ ಆಯೋಗವು ಸಾಂವಿಧಾನಿಕ ಪ್ರಾಧಿಕಾರವಾಗಿದೆ. ನಾವು ನಿಮ್ಮ ಕಳವಳಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಿಮ್ಮ ಮಾತುಗಳನ್ನು ಕೇಳುತ್ತೇವೆ,” ಎಂದು ಭರವಸೆ ನೀಡಿದರು.
ನ್ಯಾಯಮೂರ್ತಿ ಬಾಗ್ಚಿ, “SIR ಇಲ್ಲದಿದ್ದರೆ ಜನವರಿ 2025ರ ಪಟ್ಟಿಯು ಆರಂಭಿಕ ಹಂತವಾಗಿದೆ. ಇದು ಕೇವಲ ಕರಡು ಪಟ್ಟಿ. ಮತದಾರರು ಹೊಸ ಅರ್ಜಿಯ ಮೂಲಕ ತಮ್ಮ ಹೆಸರನ್ನು ಸೇರಿಸಿಕೊಳ್ಳಬಹುದು. ಆದರೆ ‘ಸಾಮೂಹಿಕವಾಗಿ ಹೊರಗಿಡುವಿಕೆ’ ಸಂಭವಿಸಿದರೆ, ನ್ಯಾಯಾಲಯ ಮಧ್ಯಪ್ರವೇಶಿಸುತ್ತವೆ. 15 ಜನರನ್ನು ಕರೆತನ್ನಿ. ಅವರ ಸ್ಥಿತಿಗತಿ ಏನೊಂದು ವಿಚಾರಿಸೋಣ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್‌ಜೆಡಿ ಸಂಸದ ಮನೋಜ್ ಝಾ ಪರ ವಕೀಲ ಕಪಿಲ್ ಸಿಬಲ್, “ಆ 65 ಲಕ್ಷ ಜನರು ಯಾರೆಂಬ ಮಾಹಿತಿ ಚುನಾವಣಾ ಆಯೋಗದ ಬಳಿ ಇದೆ. ಅವರು ಕರಡು ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಿದರೆ, ನಮಗೆ ಯಾವುದೇ ತಕರಾರಿಲ್ಲ,” ಎಂದರು.
ಇದಕ್ಕೆ ಪ್ರತಿಯಾಗಿ, ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ, “ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನಿಯಮಿತ ಪ್ರಕ್ರಿಯೆ ಇದೆ. ಈ ಹಂತದಲ್ಲಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬಾರದು,” ಎಂದರು.
ಇದಕ್ಕೂ ಮೊದಲು ಜೂನ್ 24ರಂದು, ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ, ಜನಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 21(3) ಅಡಿಯಲ್ಲಿ ಬಿಹಾರದಲ್ಲಿ SIR ಪ್ರಕ್ರಿಯೆಯನ್ನು ಪ್ರಾರಂಭಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದ್ದು, ಮತದಾರರ ಗುರುತಿಗೆ ಆಧಾರ್ ಹಾಗೂ EPIC ಅನ್ನು ಪರಿಗಣಿಸುವಂತೆ ಸೂಚನೆ ನೀಡಿತ್ತು.