×
Ad

ಐಐಎಂ-ಕೋಲ್ಕತ್ತಾ ಅತ್ಯಾಚಾರ ಪ್ರಕರಣ | ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿರುವುದನ್ನು ಒಪ್ಪಿಕೊಂಡ ಆರೋಪಿ

Update: 2025-07-14 19:49 IST

PC | timesofindia

ಹೊಸದಿಲ್ಲಿ, ಜು. 14: ಸಮೀಪದ ಮೆಡಿಕಲ್‌ ನಿಂದ ನಿದ್ರೆ ಮಾತ್ರೆಗಳನ್ನು ಖರೀದಿಸಿ, ಅಪರಾಧ ಎಸಗುವ ಮುನ್ನ ಯುವತಿಗೆ ನೀಡಲಾದ ತಂಪು ಪಾನೀಯ ಹಾಗೂ ಕುಡಿಯವ ನೀರಿನಲ್ಲಿ ಬೆರೆಸಿರುವುದಾಗಿ ಇಂಡಿಯನ್ ಇನ್‌ ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ ಮೆಂಟ್-ಕೋಲ್ಕತ್ತಾ ಕ್ಯಾಂಪಸ್ ಅತ್ಯಾಚಾರ ಪ್ರಕರಣದ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸರು ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ಆದರೆ, ಐಐಎಂ-ಕೋಲ್ಕತ್ತಾದ ಆರೋಪಿ ವಿದ್ಯಾರ್ಥಿಯ ಹೇಳಿಕೆಗಳಲ್ಲಿ ಹಲವು ವಿರೋಧಾಭಾಸಗಳು ಕಂಡು ಬಂದಿವೆ ಎಂದು ಅವರು ತಿಳಿಸಿದ್ದಾರೆ.

‘‘ಆರೋಪಿ ನಿದ್ರೆ ಮಾತ್ರೆಗಳನ್ನು ತಂದು ತಂಪು ಪಾನೀಯ ಹಾಗೂ ಕುಡಿಯುವ ನೀರಿನಲ್ಲಿ ಬೆರೆಸಿ ಯುವತಿಗೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಕೌನ್ಸಿಲಿಂಗ್‌ ಗೆ ತನ್ನ ಬಳಿ ಬಂದ ಯುವತಿಗೆ ಇದನ್ನೆಲ್ಲ ಮಾಡಿರುವುದರ ಹಿಂದಿನ ನಿಜವಾದ ಉದ್ದೇಶ ಏನೆಂದು ಆತ ಸ್ಪಷ್ಟಪಡಿಸಿಲ್ಲ’’ ಎಂದು ಅವರು ತಿಳಿಸಿದ್ದಾರೆ.

ಯುವತಿ ತಂಪು ಪಾನೀಯ ಸೇವಿಸಿದ ಬಳಿಕ ಅಪರಾಧ ನಡೆದ ಸ್ಥಳವೆಂದು ಹೇಳಲಾದ ಪುರುಷರ ಹಾಸ್ಟೆಲ್‌ ನ ಕೊಠಡಿಗೆ ತೆರಳಿದ್ದಾಳೆ ಎಂದು ಸಾಂದರ್ಭಿಕ ಸಾಕ್ಷ್ಯ ತಿಳಿಸಿದೆ ಎಂದು ಅವರು ಹೇಳಿದ್ದಾರೆ.

ಅಪರಾಧ ಎಸಗಿದ ಬಳಿಕ ಆರೋಪಿ ತನ್ನ ಸ್ನೇಹಿತರಲ್ಲಿ ಓರ್ವನಿಗೆ ಕರೆ ಮಾಡಿ ಕೃತ್ಯದ ಬಗ್ಗೆ ವಿವರಿಸಿದ್ದಾನೆ. ಮಾತುಕತೆಯ ಸಂದರ್ಭ ಆತ ಅಪರಾಧ ನಡೆದ ಕೋಣೆಯ ಮುಂಬಾಗದ ವರಾಂಡದಲ್ಲಿ ಅಡ್ಡಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ಮಾತನಾಡಿದ ಅವರು, ಆಕೆ ನಿಜವಾಗಿಯೂ ಮನಃಶಾಸ್ತ್ರಜ್ಞಳೇ, ಅಲ್ಲವೇ ಎಂಬ ಬಗ್ಗೆ ಗೊಂದಲವಿದೆ ಎಂದರು. ‘‘ ಮನಃಶಾಸ್ತ್ರಜ್ಞೆ ಎಂಬ ಪ್ರತಿಪಾದನೆಗೆ ಆಕೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಯಾವ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಎಂದು ಕೂಡ ಆಕೆ ಬಹಿರಂಗಪಡಿಸಿಲ್ಲ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News