ಹಣ ಅಕ್ರಮ ವರ್ಗಾವಣೆ ಪ್ರಕರಣ | ಎನ್‌ಸಿಪಿ ನಾಯಕ ನವಾಬ್ ಮಲಿಕ್‌ಗೆ ಸುಪ್ರೀಂ ಕೋರ್ಟ್ ಜಾಮೀನು
ನವಾಬ್ ಮಲಿಕ್ | PC : ANI
ಹೊಸದಿಲ್ಲಿ : ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್‌ಗೆ ಸುಪ್ರೀಂ ಕೋರ್ಟ್ ಮಂಗಳವಾರ ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡಿದೆ.
ನವಾಬ್ ಮಲಿಕ್ ಅವರು ಹಲವು ಖಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅವರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಪ್ರತಿಪಾದಿಸಿದರು. ಇದನ್ನು ನ್ಯಾಯಮೂರ್ತಿಗಳಾದ ಬೇಳಾ ಎಂ. ತ್ರಿವೇದಿ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನು ಒಳಗೊಂಡ ಪೀಠ ಗಮನಕ್ಕೆ ತೆಗೆದುಕೊಂಡಿತು.
ಬಾಂಬೆ ಉಚ್ಚ ನ್ಯಾಯಾಲಯದ ಮುಂದಿರುವ ಜಾಮೀನು ಅರ್ಜಿ ಇತ್ಯರ್ಥ ಆಗುವ ವರೆಗೆ ನವಾಬ್ ಮಲಿಕ್ ಅವರಿಗೆ ವೈದ್ಯಕೀಯ ನೆಲೆಯಲ್ಲಿ ನೀಡಲಾದ ಜಾಮೀನು ಮಾನ್ಯವಾಗಿರುತ್ತದೆ ಎಂದು ಪೀಠ ಹೇಳಿತು.
ಜಾರಿ ನಿರ್ದೇಶನಾಲಯ(ಈಡಿ)ದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ನವಾಬ್ ಮಲಿಕ್ ಅವರಿಗೆ ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡಲು ವಿರೋಧ ವ್ಯಕ್ತಪಡಿಸಲಿಲ್ಲ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರರ ಚಟುವಟಿಕೆಗಳೊಂದಿಗೆ ನಂಟು ಹೊಂದಿದ ಆರೋಪದ ಪ್ರಕರಣದಲ್ಲಿ 2022 ಫೆಬ್ರವರಿಯಲ್ಲಿ ನವಾಬ್ ಮಲಿಕ್‌ನನ್ನು ಜಾರಿ ನಿರ್ದೇಶನಾಲಯ(ಈಡಿ) ಬಂಧಿಸಿತ್ತು.