ನಾನು ಬಂಗಾಳದ ಉವೈಸಿ: ಟಿಎಂಸಿ ಪಕ್ಷದ ಮುಸ್ಲಿಂ ಮತಬ್ಯಾಂಕ್ ಧ್ವಂಸಕ್ಕೆ ಶಾಸಕ ಪಣ
PC | NDTV
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್, "ನಾನು ಬಂಗಾಳದ ಅಸಾದುದ್ದೀನ್ ಉವೈಸಿ. ತೃಣಮೂಲ ಕಾಂಗ್ರೆಸ್ ಪಕ್ಷದ ಮುಸ್ಲಿಂ ಮತಬ್ಯಾಂಕ್ ನಾಶಕ್ಕೆ ಪಣ ತೊಟ್ಟಿದ್ದೇನೆ" ಎಂದು ಗುಡುಗಿದ್ದಾರೆ.
"ನೀನು ಎಐಎಂಐಎಂ ಮುಖ್ಯಸ್ಥನ ಬಂಗಾಳದ ಪ್ರತಿರೂಪವಾಗಬಲ್ಲೆ" ಎಂದು ಸ್ವತಃ ಹೈದರಾಬಾದ್ ಸಂಸದರಾಗಿರುವ ಉವೈಸಿ ಹೇಳಿದಾಗಿ ಕಬೀರ್ ಹೇಳಿಕೊಂಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, "ನಾನು ಉವೈಸಿ ಜತೆ ಮಾತನಾಡಿದ್ದೇನೆ. ಅವರು ಹೈದ್ರಾಬಾದ್ ಉವೈಸಿ ಹಾಗೂ ನಾನು ಬಂಗಾಳದ ಉವೈಸಿ ಎಂದು ಅವರು ಹೇಳಿದ್ದಾರೆ" ಎಂದರು.
"ಪಕ್ಷದ ಸಮಿತಿ ಪರವಾಗಿ ನಾನು ಡಿಸೆಂಬರ್ 10ರಂದು ಕೊಲ್ಕತ್ತಾಗೆ ತೆರಳುತ್ತೇನೆ ಹಾಗೂ ಡಿಸೆಂಬರ್ ನಲ್ಲಿ 2 ಲಕ್ಷ ಬೆಂಬಲಿಗರೊಂದಿಗೆ ಪಕ್ಷಕ್ಕೆ ಚಾಲನೆ ನೀಡುತ್ತೇನೆ" ಎಂದು ಪ್ರಕಟಿಸಿದರು. ಮುಸ್ಲಿಂ ಬೆಂಬಲದ ಕನಸು ಕಾಣುತ್ತಿರುವ ತೃಣಮೂಲ ಕಾಂಗ್ರೆಸ್‍ನ ಕನಸನ್ನು ಛಿದ್ರಗೊಳಿಸುವುದಾಗಿ ಅವರು ಹೇಳಿದರು.
ಬಂಗಾಳದ ಒಟ್ಟು ಮತದಾರರ ಪೈಕಿ ಶೇಕಡ 27ರಷ್ಟು ಮಂದಿ ಮುಸ್ಲಿಮರಿದ್ದು, ಬಹುತೇಕ ಮಂದಿ ತೃಣಮೂಲ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. "ನಾನು ಮುಸ್ಲಿಂ ಪರವಾಗಿ ಕೆಲಸ ಮಾಡುವ ಹೊಸ ಪಕ್ಷ ಕಟ್ಟುತ್ತೇನೆ. 135 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇನೆ ಹಾಗೂ ಬಂಗಾಳ ಚುನಾವಣೆಯ ಗೇಮ್‍ಚೇಂಜರ್ ಎನಿಸಿಕೊಳ್ಳಲಿದ್ದೇನೆ. ತೃಣಮೂಲ ಕಾಂಗ್ರೆಸ್‍ನ ಮುಸ್ಲಿಂ ವೋಟ್‍ಬ್ಯಾಂಕ್‍ಗೆ ಅಂತ್ಯ ಕಾಣಿಸುತ್ತೇನೆ" ಎಂದು ಗುಡುಗಿದರು.