ಬಾಹ್ಯಾಕಾಶದಲ್ಲಿ ರಾಷ್ಟ್ರೀಯತೆಗಿಂತ ಮಾನವೀಯತೆ ಮುಖ್ಯ : ಶುಭಾಂಶು ಶುಕ್ಲಾ
Photo | PTI
ಪಣಜಿ : ಒಬ್ಬರು ಬಾಹ್ಯಾಕಾಶಕ್ಕೆ ಹೋದಾಗ, ಭೂಮಿಯು ಅವರ ಗುರುತಾಗುತ್ತದೆ. ಬಾಹ್ಯಾಕಾಶದಲ್ಲಿ ರಾಷ್ಟ್ರೀಯತೆಗಿಂತ ಮಾನವೀಯತೆ ಮುಖ್ಯ ಎಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ಕ್ಕೆ ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹೇಳಿದ್ದಾರೆ.
ಗೋವಾದಲ್ಲಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ಗೆ ಸಂಯೋಜಿತವಾಗಿರುವ ಶಾಲೆಗಳ ವಿದ್ಯಾರ್ಥಿಗಳಿಗಾಗಿ ‘ಇಗ್ನೈಟಿಂಗ್ ಮೈಂಡ್ಸ್, ಎಕ್ಸ್ಪ್ಲೋರಿಂಗ್ ಫ್ರಾಂಟಿಯರ್ಸ್: ದಿ ಕನ್ವರ್ಜೆನ್ಸ್ ಆಫ್ ಸ್ಪೇಸ್, ಎಜುಕೇಶನ್ ಆ್ಯಂಡ್ ಇಂಡಸ್ಟ್ರಿ’ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಶುಭಾಂಶು ಶುಕ್ಲಾ, ಬಾಹ್ಯಾಕಾಶದಲ್ಲಿ ರಾಷ್ಟ್ರೀಯತೆ ಮುಖ್ಯವಲ್ಲ. ಏಕೆಂದರೆ ಮಾನವೀಯತೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇದು ತುಂಬಾ ಆಕರ್ಷಕವಾಗಿತ್ತು. ಜನರು ಈ ಜಗತ್ತಿನಲ್ಲಿ ವಿಭಿನ್ನ ಗುರುತುಗಳನ್ನು ಹೊಂದಿರಬಹುದು, ಆದರೆ ಬಾಹ್ಯಾಕಾಶದಲ್ಲಿದ್ದಾಗ ಅವು ಮಸುಕಾಗುತ್ತವೆ ಎಂದು ಹೇಳಿದರು.
ನೀವು ಮಗುವಾಗಿದ್ದಾಗ ಮತ್ತು ಶಾಲೆಗೆ ಹೋಗುವಾಗ, ನಮ್ಮ ಮನೆ ಮತ್ತು ಪೋಷಕರು ನಮ್ಮ ಗುರುತಾಗುತ್ತಾರೆ. ನಾವು ಕಾಲೇಜಿಗೆ ಹೋದಾಗ, ಕಾಲೇಜು ನಮ್ಮ ಗುರುತಾಗುತ್ತದೆ. ನಗರವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋದಾಗ, ಆ ನಗರವು ನಿಮ್ಮ ಗುರುತಾಗುತ್ತದೆ. ವಿದೇಶಕ್ಕೆ ಹೋದಾಗ, ನಿಮ್ಮ ದೇಶವು ನಿಮ್ಮ ಗುರುತಾಗುತ್ತದೆ. ನಾನು ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದ್ದಾಗ, ನನ್ನ ದೇಶವು ನನ್ನ ಗುರುತಾಗಿತ್ತು. ನೀವು ಗ್ರಹವನ್ನು ತೊರೆದಾಗ, ನಿಮ್ಮ ಗ್ರಹವು ನಿಮ್ಮ ಗುರುತಾಗುತ್ತದೆ. ಅದು ತುಂಬಾ ಬಲವಾದ ಭಾವನೆ, ಇಡೀ ಭೂಮಿಯು ನಿಮ್ಮ ಮನೆಯಾಗುತ್ತದೆ ಎಂದು ಶುಭಾಂಶು ಶುಕ್ಲಾ ಹೇಳಿದರು.