ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 19 ವರ್ಷದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು: ವರದಿ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 19 ವರ್ಷದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು. ಶೇ.13ರಷ್ಟು 22ರ ಹರೆಯದ ಮಹಿಳೆಯರು ಕಾನೂನುಬದ್ಧ ಮದುವೆ ವಯಸ್ಸಾದ 18 ವರ್ಷಕ್ಕೆ ಮುನ್ನವೇ ವಿವಾಹವಾಗಿದ್ದರು ಎಂದು ಮೇ 30ರಂದು ಬಿಡುಗಡೆಗೊಂಡ ಅಧ್ಯಯನ ವರದಿಯು ಸೂಚಿಸಿದೆ.
ಸಮೀಕ್ಷೆಗೊಳಪಡಿಸಲಾದ 22ರ ಹರೆಯದ 1,826 ಮಹಿಳೆಯರು ತಮ್ಮ 19ನೇ ವರ್ಷದಲ್ಲೇ ಮಗುವನ್ನು ಹೊಂದಿದ್ದರು. ಈ ವಿಷಯದಲ್ಲಿ ಮಹಿಳೆಯ ತಾಯಿಯ ಶೈಕ್ಷಣಿಕ ಸ್ಥಿತಿಗತಿಯು ಗಮನಾರ್ಹ ಪ್ರಭಾವವನ್ನು ಬೀರಿದೆ ಎಂದು ಸಮೀಕ್ಷೆಯು ಬಟ್ಟು ಮಾಡಿದೆ.
ಆಕ್ಸ್‌ಫರ್ಡ್ ಡಿಪಾರ್ಟ್‌ಮೆಂಟ್ ಆಫ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ನಡೆಸಿದ ಯಂಗ್ ಲೈವ್ಸ್ ಸರ್ವೆಗಾಗಿ ಆ.2023 ಮತ್ತು ಜ.2024ರ ನಡುವೆ ದತ್ತಾಂಶಗಳನ್ನು ಸಂಗ್ರಹಿಸಲಾಗಿತ್ತು. ಸರ್ವೆಯು 2022ರಿಂದಲೂ ಇಥಿಯೋಪಿಯಾ, ಭಾರತ, ಪೆರು ಮತ್ತು ವಿಯೆಟ್ನಾಮ್‌ಗಳಲ್ಲಿಯ 12,000 ಮಕ್ಕಳಲ್ಲಿ ಬಡತನ ಮತ್ತು ಅಸಮಾನತೆಯನ್ನು ದಾಖಲಿಸುತ್ತಿದೆ.
ಭಾರತದಲ್ಲಿ ಅಧ್ಯಯನವು ಅವಿಭಜಿತ ಆಂಧ್ರಪ್ರದೇಶವನ್ನು ಕೇಂದ್ರೀಕರಿಸಿದ್ದು, 20 ಮಂಡಲಗಳನ್ನು ಒಳಗೊಂಡಿದೆ. ಈ ಪೈಕಿ 13 ಮಂಡಲಗಳು ಆಂಧ್ರಪ್ರದೇಶದಲ್ಲಿದ್ದರೆ ಏಳು ತೆಲಂಗಾಂಣದಲ್ಲಿವೆ.
22ರ ಹರೆಯದ ಶೇ.12.5ರಷ್ಟು ಮಹಿಳೆಯರು ಕಾನೂನುಬದ್ಧ ವಯಸ್ಸಿಗೆ ಮುನ್ನವೇ ಮದುವೆಯಾಗಿದ್ದಾರೆ ಎಂದು ವರದಿಯು ತಿಳಿಸಿದೆ. ಈ ವಯೋಗುಂಪಿನ ಕೇವಲ ಶೇ.3.2ರಷ್ಟು ಪುರುಷರು ಕಾನೂನುಬದ್ಧ ವಯಸ್ಸಿಗೆ ಮುನ್ನವೇ ಮದುವೆಯಾಗಿದ್ದರು. ಭಾರತದಲ್ಲಿ ಮದುವೆಗೆ ಕಾನೂನುಬದ್ಧ ವಯಸ್ಸು ಮಹಿಳೆಯರಿಗೆ 18 ವರ್ಷ ಮತ್ತು ಪುರುಷರಿಗೆ 21 ವರ್ಷ ಆಗಿದೆ.
ಈ ವಯೋಗುಂಪಿನಲ್ಲಿ ಮಹಿಳೆಯರು ಮದುವೆಯಾಗುವ ಮತ್ತು ಪೋಷಕರಾಗುವ ಅನುಭವ ಹೊಂದಿರುವ ಸಾಧ್ಯತೆ ಪುರುಷರಿಗಿಂತ ಹೆಚ್ಚು. ಸಮೀಕ್ಷೆಗೊಳಗಾದವರ ಪೈಕಿ 22ರ ಹರೆಯದ ವೇಳೆಗೆ ಶೇ.47ರಷ್ಟು ಮಹಿಳೆಯರು ಮದುವೆಯಾಗಿದ್ದರು ಅಥವಾ ಮಗುವನ್ನು ಹೊಂದಿದ್ದರು. ಇದು ಪುರುಷರಲ್ಲಿ ಕೇವಲ ಶೇ.5.8ರಷ್ಟಿತ್ತು. ಶೇ.0.8ರಷ್ಟು ಪುರುಷರಿಗೆ ಹೋಲಿಸಿದರೆ ಶೇ.17.9ರಷ್ಟು ಮಹಿಳೆಯರು ತಮ್ಮ 19ನೇ ವಯಸ್ಸಿಗೆ ಮಗುವನ್ನು ಹೊಂದಿದ್ದರು. ಕಡಿಮೆ ಔಪಚಾರಿಕ ಶಿಕ್ಷಣವನ್ನು ಹೊಂದಿರುವ ತಾಯಂದಿರಿರುವ ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸೇರಿದವವರು ಬೇಗನೇ ಮದುವೆಯಾಗುವ ಮುತ್ತು ಮಕ್ಕಳನ್ನು ಪಡೆಯುವ ಸಾಧ್ಯತೆ ಹೆಚ್ಚು ಎನ್ನುವುದನ್ನೂ ಸಮೀಕ್ಷೆಯು ಕಂಡುಕೊಂಡಿದೆ.
ಆರ್ಥಿಕವಾಗಿ ಕೆಳಮಟ್ಟದ ಗುಂಪಿನ ಸುಮಾರು ಶೇ.28ರಷ್ಟು ಮಹಿಳೆಯರು 22ರ ಪ್ರಾಯದೊಳಗೆ ಮದುವೆಯಾಗಿದ್ದರೆ ಅಥವಾ ಮಗುವನ್ನು ಹೊಂದಿದ್ದರೆ ಆರ್ಥಿಕವಾಗಿ ಉನ್ನತ ಮಟ್ಟದ ಗುಂಪಿನಲ್ಲಿ ಇಂತಹವರ ಪ್ರಮಾಣ ಶೇ.16.6ರಷ್ಟಿತ್ತು.
ಅನಕ್ಷರಸ್ಥ ತಾಯಂದಿರನ್ನು ಹೊಂದಿರುವ 22ರ ಹರೆಯದವರಲ್ಲಿ ಶೇ.31.4ರಷ್ಟು ಮಹಿಳೆಯರು ಮದುವೆಯಾಗಿದ್ದರೆ ಅಥವಾ ಮಗುವನ್ನು ಹೊಂದಿದ್ದರೆ ಈ ಪ್ರಮಾಣ ಕನಿಷ್ಠ 10 ವರ್ಷ ಅಥವಾ ಹೆಚ್ಚಿನ ಶಾಲಾ ಶಿಕ್ಷಣ ಹೊಂದಿದ್ದ ತಾಯಂದಿರಿದ್ದ ಮಹಿಳೆಯರಲ್ಲಿ ಶೇ.3.8ರಷ್ಟಿತ್ತು.
ಕಾನೂನುಬದ್ಧ ವಯಸ್ಸಿಗೆ ಮುನ್ನವೇ ಮದುವೆಯಾದ ಮಹಿಳೆಯರು ಮತ್ತು 19 ವರ್ಷ ಪ್ರಾಯದೊಳಗೆ ಮಗುವನ್ನು ಹೊಂದಿರುವ ಮಹಿಳೆಯರು ಈ ಎರಡೂ ಸಂದರ್ಭಗಳಲ್ಲಿ ತಾಯಂದಿರು ಹೆಚ್ಚು ವಿದ್ಯಾವಂತರಾಗಿರುವುದು ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಎನ್ನುವುದು ಕಂಡುಬಂದಿದೆ.
10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸದ ತಾಯಂದಿರನ್ನು ಹೊಂದಿರುವ ಯಾವುದೇ ಮಹಿಳೆಯರು ಕಾನೂನುಬದ್ಧ ವಯಸ್ಸಿಗೆ ಮುನ್ನವೇ ಮದುವೆಯಾಗಿರಲಿಲ್ಲ. ಇದಕ್ಕೆ ಹೋಲಿಸಿದರೆ ಅನಕ್ಷರಸ್ಥ ತಾಯಂದಿರನ್ನು ಹೊಂದಿರುವ ಶೇ.10.7ರಷ್ಟು ಮಹಿಳೆಯರು ಕಾನೂನುಬದ್ಧ ವಯಸ್ಸಿಗೆ ಮುನ್ನವೇ ಮದುವೆಯಾಗಿದ್ದರು.
19 ವರ್ಷ ವಯಸ್ಸಿನೊಳಗೆ ಮಗುವನ್ನು ಪಡೆದ ಮಹಿಳೆಯರಿಗೆ ಸಂಬಂಧಿಸಿದಂತೆ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದ ತಾಯಂದಿರನ್ನು ಹೊಂದಿರುವವರ ಶೇಕಡಾವಾರು ಪ್ರಮಾಣ ಕೇವಲ 1.3ರಷ್ಟಿದ್ದರೆ ಅನಕ್ಷರಸ್ಥ ತಾಯಂದಿರನ್ನು ಹೊಂದಿರುವರಲ್ಲಿ ಈ ಪ್ರಮಾಣ ಶೇ.12.3ರಷ್ಟಿತ್ತು ಎಂದು ವರದಿಯು ತಿಳಿಸಿದೆ.
ಸೌಜನ್ಯ: thenewsminute.com