ಬ್ರಿಟಿಷರ ಪ್ರಭಾವದಿಂದಾಗಿ ಭಾರತದ ಚರಿತ್ರೆ ಅಸಮರ್ಪಕವಾಗಿದೆ: ರಾಜಸ್ಥಾನ ರಾಜ್ಯಪಾಲರ ಆರೋಪ
ಹರಿಬಾವು ಬಾಗಡೆ | Credit: X/@RajBhavanJaipur
ಜೈಪುರ: ವ್ಯಾಪಕವಾಗಿ ಉಲ್ಲೇಖಿಸಲಾಗುವ ಜೋಧಾ ಬಾಯಿ ಹಾಗೂ ಮುಘಲ್ ದೊರೆ ಅಕ್ಬರ್ ವಿವಾಹ ಸೇರಿದಂತೆ ಹಲವು ಅಸಮರ್ಪಕ ಸಂಗತಿಗಳು ಈ ಹಿಂದಿನ ಬ್ರಿಟಿಷ್ ಇತಿಹಾಸಕಾರರ ಪ್ರಭಾವದಿಂದ ಭಾರತೀಯ ಇತಿಹಾಸದಲ್ಲಿ ಉಲ್ಲೇಖವಾಗಿವೆ ಎಂದು ರಾಜಸ್ಥಾನ ರಾಜ್ಯಪಾಲ ಹರಿಬಾವು ಬಾಗಡೆ ಆರೋಪಿಸಿದ್ದಾರೆ.
ಬುಧವಾರ ಸಂಜೆ ಉದಯ್ ಪುರ್ ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಕ್ಬರ್ ನಾಮದಲ್ಲಿ ಜೋಧಾ ಮತ್ತು ಅಕ್ಬರ್ ವಿವಾಹದ ಕುರಿತು ಯಾವುದೇ ಉಲ್ಲೇಖವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
“ಜೋಧಾ ಹಾಗೂ ಅಕ್ಬರ್ ವಿವಾಹವಾದರು ಎಂದು ಹೇಳಲಾಗಿದ್ದು, ಈ ಕತೆಯನ್ನು ಆಧರಿಸಿ ಚಲನಚಿತ್ರವೊಂದನ್ನೂ ನಿರ್ಮಿಸಲಾಗಿದೆ. ಇತಿಹಾಸದ ಪುಸ್ತಕಗಳೂ ಕೂಡಾ ಇದೇ ಸಂಗತಿಯನ್ನು ಹೇಳುತ್ತವಾದರೂ, ಅದು ಸುಳ್ಳು” ಎಂದು ಅವರು ಅಲ್ಲಗಳೆದಿದ್ದಾರೆ.
“ಭಾರ್ಮಲ್ ಎಂಬ ಹೆಸರಿನ ರಾಜನೊಬ್ಬನಿದ್ದ ಹಾಗೂ ಆತ ಅಕ್ಬರ್ ವಿವಾಹವಾಗಿದ್ದ ಮನೆಗೆಲಸದಾಕೆಯ ಪುತ್ರಿಯನ್ನು ದತ್ತು ಪಡೆದಿದ್ದ” ಎಂದೂ ಅವರು ಹೇಳಿದ್ದಾರೆ.
“ನಮ್ಮ ವೀರರ ಇತಿಹಾಸವನ್ನು ಬ್ರಿಟಿಷರು ಬದಲಿಸಿದ್ದಾರೆ. ಅವರು ಅದನ್ನು ಸಮರ್ಪಕವಾಗಿ ರಚಿಸಲಿಲ್ಲ ಹಾಗೂ ಅವರ ಇತಿಹಾಸದ ದೃಷ್ಟಿಕೋನವನ್ನು ಆರಂಭದಲ್ಲಿ ಒಪ್ಪಿಕೊಳ್ಳಲಾಗಿತ್ತು. ನಂತರ, ಕೆಲವು ಭಾರತೀಯರೂ ಇತಿಹಾಸವನ್ನು ರಚಿಸಿದರಾದರೂ, ಅದೂ ಕೂಡಾ ಬ್ರಿಟಿಷರಿಂದ ಪ್ರಭಾವಿತಗೊಂಡಿತ್ತು” ಎಂದು ಅವರು ದೂರಿದ್ದಾರೆ.
ರಾಜಸ್ಥಾನ ರಾಜ್ಯಪಾಲರ ಈ ಹೇಳಿಕೆಯು, ಇತಿಹಾಸದಲ್ಲಿ ದಾಖಲಾಗಿರುವ 1959ರಲ್ಲಿನ ಅಕ್ಬರ್ ಹಾಗೂ ಭಾರ್ಮಲ್ ಪುತ್ರಿಯ ವಿವಾಹ ಸಂಗತಿಯ ಕುರಿತು ಮತ್ತೊಂದು ಸುತ್ತಿನ ಚರ್ಚೆಯ ಕಿಡಿ ಹೊತ್ತಿಸಿದೆ.