ಭಾರತ-ಚೀನಾ ನಡುವೆ ನೇರ ವಿಮಾನ ಹಾರಾಟ ಆರಂಭ
ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ, ಅ. 27: ಭಾರತ ಮತ್ತು ಚೀನಾ ನಡುವಿನ ಸಂಬಂಧ ಸುಧಾರಣೆಯಾಗುತ್ತಿರುವಂತೆಯೇ, ಉಭಯ ದೇಶಗಳ ನಡುವಿನ ನೇರ ವಿಮಾನ ಹಾರಾಟ ಪುನರಾರಂಭಗೊಂಡಿದೆ.
ಕೋಲ್ಕತಾದಿಂದ ಸುಮಾರು 180 ಪ್ರಯಾಣಿಕರನ್ನು ಹೊತ್ತ ಇಂಡಿಗೋ 6ಇ 1703 ವಿಮಾನವು ಸೋಮವಾರ ಚೀನಾದ ನಗರ ಗುವಾಂಗ್‌ಝೂನಲ್ಲಿ ಇಳಿಯಿತು.
ಭಾರತ ಮತ್ತು ಚೀನಾ ದೇಶಗಳ ನಡುವಿನ ನೇರ ವಿಮಾನ ಹಾರಾಟವನ್ನು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ, 2020ರ ಆದಿಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಲಡಾಖ್ ವಲಯದ ಗಲ್ವಾನ್ ನಲ್ಲಿ ಉಭಯ ದೇಶಗಳ ಸೈನಿಕರ ನಡುವೆ ನಡೆದ ಭೀಕರ ಸಂಘರ್ಷದ ಹಿನ್ನೆಲೆಯಲ್ಲಿ, ನೇರ ವಿಮಾನ ಹಾರಾಟ ಪುನರಾರಂಭಗೊಳ್ಳಲಿಲ್ಲ.
ಆದರೆ, ಬಳಿಕ ಉಭಯ ದೇಶಗಳು ಪರಸ್ಪರ ಬಾಂಧವ್ಯವನ್ನು ನಿರಂತರವಾಗಿ ವೃದ್ಧಿಸಿಕೊಳ್ಳುತ್ತಾ ಬಂದಿವೆ. ಕಳೆದ ವರ್ಷ ಗಡಿಯಲ್ಲಿ ನಡೆಸಲಾಗುವ ಗಸ್ತುಗಳ ಬಗ್ಗೆ ಮಹತ್ವದ ಒಪ್ಪಂದವೊಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ.
ಉಭಯ ದೇಶಗಳ ನಡುವಿನ ನೇರ ವಿಮಾನ ಹಾರಾಟಗಳು ‘‘ಜನರ ನಡುವೆ ಸಂಪರ್ಕವನ್ನು ಸ್ಥಾಪಿಸುತ್ತವೆ ಮತ್ತು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳಿಗೆ ವೇದಿಕೆ ಸಿದ್ಧಪಡಿಸುತ್ತವೆ’’ ಎಂದು ಈ ತಿಂಗಳ ಆದಿಭಾಗದಲ್ಲಿ ನೇರ ವಿಮಾನ ಹಾರಾಟವನ್ನು ಘೋಷಿಸುತ್ತಾ ಹೇಳಿಕೆಯೊಂದರಲ್ಲಿ ಹೇಳಿತ್ತು.
ನೇರ ವಿಮಾನ ಹಾರಾಟವು, ನೆರೆಯ ದೇಶಗಳ ನಡುವಿನ ಸಂಬಂಧ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎನ್ನುವುದನ್ನು ಸೂಚಿಸುವ ಸರಣಿ ಬೆಳವಣಿಗೆಗಳ ಒಂದು ಭಾಗವಾಗಿದೆ.
ಆಗಸ್ಟ್ ತಿಂಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಚಿನಾ ಪ್ರವಾಸ ಮಾಡಿದ್ದರು. ಅವರು ಶಾಂಘೈ ಸಹಕಾರ ಸಂಘಟನೆಯ ನೇಪಥ್ಯದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರನ್ನು ಭೇಟಿಯಾಗಿದ್ದರು. ಆ ತಿಂಗಳ ಆರಂಭದಲ್ಲಿ, ಚೀನಾದ ವಿದೇಶ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿ, ಉದ್ವಿಗ್ನತೆ ಶಮನ ಮತ್ತು ಗಡಿ ವಿವಾದ ಬಗ್ಗೆ ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು.