×
Ad

ಭಾರತ-ರಶ್ಯ ಶೃಂಗಸಭೆ | ಭಾರತವು ತಟಸ್ಥವಲ್ಲ,ಅದು ಶಾಂತಿಯ ಪರವಾಗಿದೆ: ಮೋದಿ

ಉಭಯ ದೇಶಗಳ ನಡುವಿನ ಆಳವಾದ ಸಂಬಂಧವನ್ನು ಪ್ರಶಂಸಿಸಿದ ಪುಟಿನ್

Update: 2025-12-05 21:45 IST

ನರೇಂದ್ರ ಮೋದಿ , ವ್ಲಾಡಿಮಿರ್ ಪುಟಿನ್ | Photo Credit ; PTI 

ಹೊಸದಿಲ್ಲಿ,ಡಿ.5: ಭಾರತವು ತಟಸ್ಥವಾಗಿಲ್ಲ ಮತ್ತು ಅದು ಉಕ್ರೇನ್ ಯುದ್ಧದಲ್ಲಿ ಶಾಂತಿಯ ಪರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ದ್ವಿಪಕ್ಷೀಯ ಮಾತುಕತೆ ಸಂದರ್ಭ ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿದರು. ಇದು ಡಿಸೆಂಬರ್ 2021ರ ಬಳಿಕ ಮತ್ತು ಫೆ.2022ರಲ್ಲಿ ಉಕ್ರೇನ್ ಯುದ್ಧ ಭುಗಿಲೆದ್ದ ಬಳಿಕ ಪುಟಿನ್ ಅವರ ಮೊದಲ ಭಾರತ ಭೇಟಿಯಾಗಿದೆ.

ಈ ಭೇಟಿಯು 23ನೇ ಭಾರತ-ರಶ್ಯ ವಾರ್ಷಿಕ ಶೃಂಗಸಭೆಯ ಭಾಗವಾಗಿದ್ದು, ಇತರ ಹಲವಾರು ವಿಷಯಗಳೂ ಅಜೆಂಡಾದಲ್ಲಿವೆ.

ಪುಟಿನ್ ಗುರುವಾರ ಸಂಜೆ ದಿಲ್ಲಿಗೆ ಆಗಮಿಸಿದ್ದು, ಮೋದಿ ಶಿಷ್ಟಾಚಾರಗಳನ್ನು ಮುರಿದು ವಿಮಾನ ನಿಲ್ದಾಣದಲ್ಲಿ ಸ್ವತಃ ಉಪಸ್ಥಿತರಿದ್ದು ಅವರನ್ನು ಸ್ವಾಗತಿಸಿದ್ದರು. ನಂತರ ಉಭಯ ನಾಯಕರು ಖಾಸಗಿ ಭೋಜನಕ್ಕಾಗಿ 7,ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಯವರ ನಿವಾಸಕ್ಕೆ ತೆರಳಿದ್ದರು.

ಹೈದರಾಬಾದ್ ಭವನದಲ್ಲಿ ನಡೆದ ಮಾತುಕತೆಗಳ ಸಂದರ್ಭದಲ್ಲಿ ಮೋದಿ,‘ಉಕ್ರೇನ್ ಯುದ್ಧ ಕುರಿತು ಭಾರತವು ತಟಸ್ಥವಾಗಿಲ್ಲ. ನಾನು ವಿಶ್ವ ನಾಯಕರ ಜೊತೆ ಸಂವಹನ ನಡೆಸಿದಾಗೆಲ್ಲ, ವಿವರವಾದ ಚರ್ಚೆಗಳಲ್ಲಿ,ಭಾರತವು ತಟಸ್ಥವಾಗಿಲ್ಲ ಎಂದು ಸದಾ ಹೇಳುತ್ತಲೇ ಬಂದಿದ್ದೇನೆ. ಭಾರತವು ಶಾಂತಿಯ ಪರವಾಗಿದೆ. ಶಾಂತಿಗಾಗಿ ಎಲ್ಲ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ ಮತ್ತು ಈ ಪ್ರಯತ್ನಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ’ಎಂದು ಪುಟಿನ್‌ ಗೆ ತಿಳಿಸಿದರು.

ಉಕ್ರೇನ್ ಬಿಕ್ಕಟ್ಟಿನುದ್ದಕ್ಕೂ ತಾವಿಬ್ಬರೂ ನಿರಂತರ ಸಂಪರ್ಕದಲ್ಲಿದ್ದನ್ನು ಒತ್ತಿ ಹೇಳಿದ ಮೋದಿ,‘ನಿಜವಾದ ಸ್ನೇಹಿತನಾಗಿ ನೀವು ಹೆಜ್ಜೆಹೆಜ್ಜೆಗೂ ನಮಗೆ ಮಾಹಿತಿ ನೀಡುತ್ತಿದ್ದೀರಿ. ವಿಶ್ವಾಸ ಒಂದು ದೊಡ್ಡ ಶಕ್ತಿಯಾಗಿದೆ ಎನ್ನುವುದು ನನ್ನ ನಂಬಿಕೆಯಾಗಿದೆ ’ಎಂದು ಹೇಳಿದರು.

ಜಗತ್ತು ಶೀಘ್ರವೇ ಚಿಂತೆಗಳಿಂದ ಮುಕ್ತವಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ ಮೋದಿ,‘ಕೋವಿಡ್‌ ನಿಂದ ಈವರೆಗೆ ಜಗತ್ತು ಹಲವಾರು ಬಿಕ್ಕಟ್ಟುಗಳನ್ನು ಎದುರಿಸಿದೆ. ಜಗತ್ತು ಶೀಘ್ರವೇ ಎಲ್ಲ ಚಿಂತೆಗಳಿಂದ ಮುಕ್ತವಾಗಿ ಜಾಗತಿಕ ಸಮುದಾಯಕ್ಕೆ ಸರಿಯಾದ ದಿಕ್ಕಿನಲ್ಲಿ ಹೊಸ ಭರವಸೆ ಮೂಡಲಿದೆ ಎಂದು ನಾವು ಆಶಿಸಿದ್ದೇವೆ’ ಎಂದು ಹೇಳಿದರು.

ಇದೆ ವೇಳೆ ಯುದ್ಧವನ್ನು ಕೊನೆಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಮೋದಿಯವರಿಗೆ ಮಾಹಿತಿ ನೀಡಿದ ಪುಟಿನ್,ರಶ್ಯ ಮತ್ತು ಅದರ ಹಲವಾರು ಪಾಲುದಾರ ದೇಶಗಳು ಸಾಧ್ಯವಿರುವ ಶಾಂತಿಯುತ ಇತ್ಯರ್ಥಕ್ಕಾಗಿ ಶ್ರಮಿಸುತ್ತಿವೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News