ಕದನ ವಿರಾಮ ಉಲ್ಲಂಘಿಸಿದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ : ಪಾಕ್‌ಗೆ ಭಾರತ ಎಚ್ಚರಿಕೆ
PC : PTI
ಹೊಸದಿಲ್ಲಿ: ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕ್ ಅದನ್ನು ಉಲ್ಲಂಘಿಸಿರುವುದನ್ನು ಭಾರತವು ಗಂಭೀರವಾಗಿ ಪರಿಗಣಿಸಿದೆ. ಇನ್ನು ಮುಂದೆ ಅಂತಹ ಯಾವುದೇ ಉಲ್ಲಂಘನೆಗೆ ‘ಘೋರ’ವಾದ ಉತ್ತರವನ್ನು ನೀಡಲಾಗುವುದೆಂದು ಕೇಂದ್ರ ಸರಕಾರ ಶನಿವಾರ ಪಾಕ್‌ಗೆ ಎಚ್ಚರಿಕೆ ನೀಡಿದೆ.
ಕದನವಿರಾಮ ಘೋಷಣೆಯಾದ ಕೆಲವೇ ತಾಸುಗಳ ಬಳಿಕ ಶನಿವಾರ ರಾತ್ರಿ ಶ್ರೀನಗರ ಸೇರಿದಂತೆ ಜಮ್ಮುಕಾಶ್ಮೀರದ ವಿವಿಧೆಡೆ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ
ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆ.ಜ. ರಾಜೀವ್ ಘಾಯ್ ಅವರು ರವಿವಾರ ಮಾಧ್ಯಮಗಳಿಗೆ ವಿವರಣೆ ನೀಡಿದ ಸಂದರ್ಭ ಈ ವಿಷಯ ತಿಳಿಸಿದ್ದಾರೆ.
ಈ ಕದನ ವಿರಾಮ ಉಲ್ಲಂಘನೆಯನ್ನು ಭಾರತವು ಗಮನಿಸಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಉಲ್ಲಂಘನೆಯನ್ನು ತಡೆಯಲು ಸೇನಾಪಡೆಗಳ ಮುಖ್ಯಸ್ಥರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದರು.
ಕದನವಿರಾಮದ ಉಲ್ಲಂಘನೆಗಳು ಪುನರಾವರ್ತಿತವಾದಲ್ಲಿ ಅವುಗಳಿಗೆ ಭಾರತ ಭಯಾನಕವಾಗಿ ಪ್ರತಿಕ್ರಿಯಿಸಲಿದೆಯೆಂಬ ಹಾಟ್ಲೈನ್ ಸಂದೇಶವನ್ನು ಪಾಕಿಸ್ತಾನದ ಡಿಜಿಎಂಓಗೆ ಹಾಟ್ಲೈನ್ ಮೂಲಕ ಕಳುಹಿಸಲಾಗಿದೆ ಎಂದು ಘಾಯ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಏರ್ ಮಾರ್ಶಲ್ ಅವಧೇಶ್ ಕಮಾರ್ ಭಾರ್ತಿ, ವೈಸ್ ಆಡ್ಮಿರಲ್ ಎ.ಎನ್. ಪ್ರಮೋದ್ ಹಾಗೂ ಮೇಜರ್ ಜನರಲ್ ಸಂದೀಪ್ ಎಸ್. ಶಾರ್ದಾ ಅವರು ಅಪರೇಷನ್ ಸಿಂಧೂರ ಕಾರ್ಯಾಚರಣೆಯ ವಿವರಗಳನ್ನು ನೀಡಿದರು.
ಐವರು ಭಾರತೀಯ ಯೋಧರು ಹುತಾತ್ಮ :
ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂದರ್ಭ ಭಾರತೀಯ ಸೇನೆಯು ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಡಿಜಿಎಂಓ ಲೆ.ಜ.ರಾಜೀವ್ ಘಾಯ್ ಮಾಧ್ಯಮ ವಿವರಣೆಯಲ್ಲಿ ತಿಳಿಸಿದರು. ಹುತಾತ್ಮರಾದ ಸಶಸ್ತ್ರ ಪಡೆಗಳ ಐವರು ಸಿಬ್ಬಂದಿಗೆ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅವರ ಬಲಿದಾನಗಳು ಸದಾ ಸ್ಮರಿಸಲ್ಪಡಲಿವೆ’ಎಂದರು.
ಅರಬ್ಬಿ ಸಮುದ್ರದಲ್ಲಿ ಸಮರ ಸನ್ನದ್ಧವಾಗಿದ್ದ ಭಾರತೀಯ ನೌಕಾಪಡೆ :
ಅಪರೇಶನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಯನ್ನು ನಿಯೋಜಿಸಲಾಗಿತ್ತು. ಆ ಮೂಲಕ ಪಾಕ್ ನೌಕಾಪಡೆಯು ಆ ದೇಶದ ಬಂದರು, ಕರಾವಳಿಯಲ್ಲೇ ಉಳಿದುಕೊಳ್ಳುವಂತೆ ಮಾಡಲಾಯಿತು ಎಂದು ಭಾರತೀಯ ನೌಕಾಪಡೆ ರವಿವಾರ ತಿಳಿಸಿದೆ. ಇದರೊಂದಿಗೆ ರಕ್ತ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತದ ನೌಕಾಪಡೆ ಕೂಡಾ ಪಾತ್ರ ವಹಿಸಿರುವುದು ಬೆಳಕಿಗೆ ಬಂದಿದೆ.
ಪಹಲ್ಗಾಮ್ ದಾಳಿಯ ಬಳಿಕ ನೌಕಾಪಡೆಯ ಯುದ್ಧ ತಂಡಗಳ ಸಾಗಾಣಿಕೆ ನೌಕೆಗಳನ್ನು, ಜಲಾಂತರ್ಗಾಮಿಗಳನ್ನು ಹಾಗೂ ವಿಮಾನಗಳನ್ನು ಸಂಪೂರ್ಣ ಸಮರ ಸನ್ನದ್ಧತೆಯೊಂದಿಗೆ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿತ್ತು ಎಂದವರು ಹೇಳಿದರು.
ಪಹಲ್ಗಾಮ್ ದಾಳಿ ನಡೆದ 96 ತಾಸುಗಳೊಳಗೆ ಅರಬಿ ಸಮುದ್ರದಲ್ಲಿ ನೌಕಾಪಡೆಯು ವಿವಿಧ ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ನಡೆಸಿತ್ತು ಎಂದರು.
100ಕ್ಕೂ ಅಧಿಕ ಉಗ್ರರ ಹತ್ಯೆ :
ಅಪರೇಷನ್ ಸಿಂಧೂರ ಕಾರ್ಯಾಚರಣೆಯಡಿ ಭಾರತೀಯ ವಾಯುಪಡೆಯು ದಾಳಿಗೆ ಪಾಕಿಸ್ತಾನದ 9 ಗುರಿಗಳನ್ನು ಗುರುತಿಸಿತ್ತು ಹಾಗೂ ಮೇ 7ರಂದು ನಡೆಸಿದ ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದಿದೆ ಎಂದು ಹಿರಿಯ ಸೇನಾಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 35-40 ಪಾಕ್ ಯೋಧರು ಮೃತಪಟ್ಟಿದ್ದಾರೆಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಓ) ರಾಜೀವ್ ಘಾಯ್ ತಿಳಿಸಿದರು.
ಪಾಕಿಸ್ತಾನದ ಡ್ರೋನ್‌ಗಳು ವಾಯುಪಡೆಯ ಹಲವಾರು ನೆಲೆಗಳನ್ನು ಗುರಿಯಿರಿಸಿದ್ದವು. ಆದರೆ ಅವುಗಳನ್ನು ತಡೆಗಟ್ಟಲಾಗಿದೆ ಎಂದು ಏರ್ ಮಾರ್ಶಲ್ ಅವಧೇಶ್ ಕಮಾರ್ ಭಾರ್ತಿ ತಿಳಿಸಿದರು.