SIR ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮುಹಮ್ಮದ್ ಶಮಿಗೆ ಸಮನ್ಸ್
ಮುಹಮ್ಮದ್ ಶಮಿ (Photo: PTI)
ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ ಮತ್ತು ಅವರ ಸಹೋದರ ಮುಹಮ್ಮದ್ ಕೈಫ್ ಅವರಿಗೆ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ವಿಚಾರಣೆಗೆ ಹಾಜರಾಗುವಂತೆ ಚುನಾವಣಾ ಆಯೋಗ ಸಮನ್ಸ್ ಜಾರಿಗೊಳಿಸಿದೆ.
ದಕ್ಷಿಣ ಕೋಲ್ಕತ್ತಾದ ಜಾದವ್‌ಪುರ ಪ್ರದೇಶದಲ್ಲಿರುವ ಕರ್ಟ್ಜು ನಗರ ಶಾಲೆಯಿಂದ ಸೋಮವಾರ ಅಧಿಕೃತವಾಗಿ ನೋಟಿಸ್ ನೀಡಲಾಗಿದೆ. ಶಮಿ ಕೋಲ್ಕತ್ತಾ ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 93ರ ಮತದಾರರಾಗಿದ್ದು, ಈ ವಾರ್ಡ್ ರಾಶ್‌ಬೆಹಾರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ. ಶಮಿ ಅವರ ವಿಚಾರಣೆಯನ್ನು ಜನವರಿ 9ರಿಂದ 11ರ ನಡುವೆ ನಿಗದಿಪಡಿಸಲಾಗಿದೆ.
ಮೂಲಗಳ ಪ್ರಕಾರ, ಮತದಾರರ ಎಣಿಕೆ ಫಾರ್ಮ್ ಸರಿಯಾಗಿ ಭರ್ತಿ ಆಗಿಲ್ಲ ಎಂಬ ಕಾರಣದಿಂದ ಸಮನ್ಸ್ ನೀಡಲಾಗಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜ್‌ಕೋಟ್‌ನಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ನಿಗದಿಯಾಗಿದ್ದ ವಿಚಾರಣೆಗೆ ಶಮಿ ಹಾಜರಾಗಲು ಸಾಧ್ಯವಾಗಿಲ್ಲ.
ಮೂಲತಃ ಉತ್ತರ ಪ್ರದೇಶದವರಾದ ಶಮಿ, ಕ್ರಿಕೆಟ್ ವೃತ್ತಿಜೀವನದ ಆರಂಭದಲ್ಲೇ ಕೋಲ್ಕತ್ತಾಗೆ ತೆರಳಿದ್ದರು. ತರಬೇತುದಾರ ಸಂಬರನ್ ಬ್ಯಾನರ್ಜಿ ಅವರ ಗಮನ ಸೆಳೆದ ಅವರು ಬಂಗಾಳ ಅಂಡರ್–22 ತಂಡದಲ್ಲಿ ಸ್ಥಾನ ಪಡೆದು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಪಯಣ ಆರಂಭಿಸಿದ್ದರು. ಮೋಹನ್ ಬಗಾನ್ ಕ್ರಿಕೆಟ್ ಕಪ್‌ನಲ್ಲೂ ಅವರು ಆಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರೂ, ನ್ಯೂಝಿಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20I ಸರಣಿಗೆ ಶಮಿ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ.
ಇದೇ ವೇಳೆ, ನಟ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ದೇವ್ (ದೀಪಕ್ ಅಧಿಕಾರಿ) ಅವರಿಗೂ ಎಸ್‌ಐಆರ್ ವಿಚಾರಣೆಗೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇವ್ ಅವರ ಕುಟುಂಬದ ಇನ್ನೂ ಮೂವರು ಸದಸ್ಯರಿಗೂ ನೋಟಿಸ್ ಕಳುಹಿಸಲಾಗಿದೆ ಎನ್ನಲಾಗಿದೆ. ಆದರೆ, ವಿಚಾರಣೆಗೆ ಹಾಜರಾಗಬೇಕಾದ ದಿನಾಂಕ ಮತ್ತು ಸಮಯ ಇನ್ನೂ ಸ್ಪಷ್ಟವಾಗಿಲ್ಲ.
ಸಮನ್ಸ್ ಕುರಿತು ದೇವ್ ಅಥವಾ ಅವರ ಕುಟುಂಬದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆದರೆ, ನಟ ಹಾಗೂ ಜನಪ್ರತಿನಿಧಿಗೆ ಈ ರೀತಿಯ ನೋಟಿಸ್ ನೀಡಿರುವುದು ಕಿರುಕುಳದ ಕ್ರಮ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ದೇವ್ ಅವರ ಪೂರ್ವಜರ ಮನೆ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಾಟಲ್‌ನಲ್ಲಿ ಇದ್ದು, ಅವರು ಅಲ್ಲಿ ಜನಿಸಿದ್ದಾರೆ. ತಂದೆಯ ಉದ್ಯೋಗದ ಹಿನ್ನೆಲೆ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿದ್ದು, ನಂತರ ನಟನಾ ವೃತ್ತಿಜೀವನದ ಕಾರಣದಿಂದ ಕೋಲ್ಕತ್ತಾದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಸೌತ್ ಸಿಟಿ ವಸತಿ ಸಂಕೀರ್ಣದಲ್ಲಿರುವುದೇ ಅವರ ಶಾಶ್ವತ ವಿಳಾಸ. ಟಾಲಿವುಡ್‌ನ ಪ್ರಮುಖ ನಟರಾಗಿರುವ ದೇವ್, ಘಾಟಲ್‌ನಿಂದ ಮೂರು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.