×
Ad

ಮಿಗ್21 ವಿಮಾನಗಳನ್ನು ತೆರವುಗೊಳಿಸಲಿರುವ ಸ್ವದೇಶಿ ನಿರ್ಮಿತ ಎಂಕೆ-1ಎಎಸ್

Update: 2023-10-31 22:19 IST

Photo :  twitter.com/IAF_MCC

ಹೊಸದಿಲ್ಲಿ: ಮುಂದಿನ ವರ್ಷದಿಂದ ಭಾರತೀಯ ವಾಯುಪಡೆ (ಐಎಎಫ್)ಯು ಸ್ವದೇಶಿ ನಿರ್ಮಿತ ಲಘು ಸಮರ ವಿಮಾನ ಎಂಕೆ-1ಎಎಸ್ ಅನ್ನು ಮಿಗ್21 ಬದಲಿಗೆ ನಿಯೋಜಿಸಲಿದೆ.

ಹಳೆಯದಾದ ಮಿಗ್21 ಶ್ರೇಣಿಯ ಫೈಟರ್ ವಿಮಾನಗಳು ಭಾರತೀಯ ವಾಯುಪಡೆಯಲ್ಲಿ ಈಗ ಉಳಿದಿದ್ದು, ಅವುಗಳನ್ನು ಹಂತಹಂತವಾಗಿ ಸ್ವದೇಶಿ ನಿರ್ಮಿತ ಸಮರ ವಿಮಾನ ( ಎಲ್ಸಿಎ) ಎಂಕೆ-1 ಯುದ್ಧವಿಮಾನಗಳು ತೆರವುಗೊಳಿಸಲಿವೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ಉತ್ತರಿಯಾಲ್ ವಾಯುನೆಲೆಯಲ್ಲಿ ನಿಯೋಜಿತವಾಗಿರುವ ನಂ.4 ಸ್ಕ್ವಾಡ್ರನ್ ನಿಂದ ಮಿಗ್-21 ಬೈಸನ್ ವಿಮಾನವನ್ನು ಈ ವಾರದೊಳಗೆ ತೆರವುಗೊಳಿಸಲಾಗುವುದು. ನ.4 ಸ್ಕ್ವಾಡ್ರನ್ ವಾಯುದಳವು 1966ರಿಂದೀಚೆಗೆ ಕಾರ್ಯನಿರ್ವಹಿಸುತ್ತಿದೆ ಹಾಗೂ ಈಗ ಅದು ಸುಖೊಯ್-30 ಎಂಕೆಐ ವಿಮಾನದೊಂದಿಗೆ ಮರುಸಜ್ಜಿತಗೊಳ್ಳಲಿದೆ ಎಂದು ಅಧಿಕೃತ ವಕ್ತಾರರೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಮಿಗ್21ನ ಇನ್ನೆರಡು ಸ್ಕ್ವಾಡ್ರನ್ ಗಳು ಬಿಕಾನೇರ್ ಹಾಗೂ ಸೂರತ್ ಗಢದಲ್ಲಿವೆ. ಈ ಎರಡೂ ಸ್ಕ್ವಾಡ್ರನ್ ಗಳಲ್ಲಿ 16ರಿಂದ 18ರಷ್ಟು ಫೈಟರ್ ವಿಮಾನಗಳಿವೆ.

‘‘ರಾಜಸ್ತಾನದ ಬಾರ್ಮೆರ್ ಜಿಲ್ಲೆಯ ಉತ್ತರಿಯಾಲ್ ನ ಆಗಸದಲ್ಲಿ ಕೊನೆಯ ಬಾರಿಗೆ ಮಿಗ್ 21 ಬೈಸನ್ ವಿಮಾನವು ಕಾಣಿಸಿಕೊಳ್ಳಲಿದ್ದು, ಯುಗವೊಂದರ ಅಂತ್ಯವಾಗಲಿದೆ. ಇದರ ಸ್ಮರಣಾರ್ಥವಾಗಿ ಮಿಗ್-21 ಬೈಸನ್, ಎಸ್ಯು-30 ಎಂಕೆಐ ಜೊತೆ ಹಾರಾಟ ನಡೆಸಲಿದೆ’’ ಎಂದು ನೈಋತ್ಯ ತವಾಯುಕಮಾಂಡರ್ನ ವಕ್ತಾರರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೈಸನ್ ವಿಮಾನವು ಮಿಗ್21ನ ಅತ್ಯಂತ ಸುಧಾರಿತ ಶ್ರೇಣಿಯ ವಿಮಾನವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಹಲವಾರು ಮಿಗ್-21 ವಿಮಾನಗಳು ಪತನಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಭಾರತದ ಈ ಅತ್ಯಂತ ಹಳೆಯ ಫೈಟರ್ ವಿಮಾನಗಳಿಗೆ ಸಂಭವಿಸಿದ ಅವಘಡಗಳು ಕಳವಳಕ್ಕೆ ಕಾರಣವಾಗಿತ್ತು. ಪ್ರಪ್ರಥಮ ಭಾರಿಗೆ ಮಿಗ್21 ವಿಮಾನವು 1963ರಲ್ಲಿ ಮೊದಲ ಬಾರಿಗೆ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತ್ತು.

ಮಿಗ್ 21 ವಿಮಾನಗಳನ್ನು ತೆರವುಗೊಳಿಸಲಿರುವ ಎಲ್ಸಿಎ ಎಂಕೆ-1ಎ ವಿಮಾನಗಳನ್ನು ಭಾರತೀಯ ವಾಯುಪಡೆಯು ಮುಂದಿನ ವರ್ಷದಿಂದ ನಿಯೋಜಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News