ಭಾರತೀಯ ವಾಯುಪಡೆಯ ನೂತನ ಧ್ವಜ ಅನಾವರಣ
Photo: ANI
ಪ್ರಯಾಗರಾಜ್: ರವಿವಾರ ಇಲ್ಲಿ ನಡೆದ 91ನೇ ವಾಯುಪಡೆ ದಿನಾಚರಣೆಯಲ್ಲಿ ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು ಭಾರತೀಯ ವಾಯುಪಡೆ (ಐಎಎಫ್)ಯ ನೂತನ ಧ್ವಜವನ್ನು ಅನಾವರಣಗೊಳಿಸಿದರು. 72 ವರ್ಷಗಳ ಬಳಿಕ ಈ ಧ್ವಜ ಬದಲಾವಣೆ ನಡೆದಿದೆ.
ನೂತನ ಧ್ವಜದ ಮೇಲ್ಭಾಗದ ಬಲಮೂಲೆಯಲ್ಲಿ ಐಎಎಫ್ ನ ಲಾಂಛನವನ್ನು ಅಳವಡಿಸಲಾಗಿದೆ.
ಕಳೆದ ವರ್ಷವಷ್ಟೇ ಭಾರತೀಯ ನೌಕಾಪಡೆಯು ತನ್ನ ಧ್ವಜದಲ್ಲಿನ ವಸಾಹತುಶಾಹಿ ಯುಗದ ಪಳೆಯುಳಿಕೆಗಳನ್ನು ತೆಗೆದುಹಾಕಿ ಬದಲಾವಣೆಗಳನ್ನು ತಂದಿತ್ತು.
ಐಎಎಫ್ 1950ರಲ್ಲಿ ಯೂನಿಯನ್ ಜ್ಯಾಕ್ ಮತ್ತು ಹಿಂದಿನ ರಾಯಲ್ ಇಂಡಿಯನ್ ಏರ್ಫೋರ್ಸ್ನ ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳನ್ನು ಕೈಬಿಟ್ಟು ನೂತನ ಧ್ವಜವನ್ನು ಅಳವಡಿಸಿಕೊಂಡಿತ್ತು.
‘ಐಎಎಫ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇವೆ. ನಾವು ನೋಡಲು ಬಯಸುವ ಬದಲಾವಣೆಗಾಗಿ ನಾವೆಲ್ಲರೂ ಶ್ರಮಿಸೋಣ ‘ಎಂದು ತನ್ನ ಭಾಷಣದಲ್ಲಿ ಹೇಳಿದ ಚೌಧರಿ, ‘ನಮ್ಮ ವಾಯುಪಡೆಯನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು ನಾವೆಲ್ಲರೂ ಒಂದಾಗಿ ಕಾರ್ಯ ನಿರ್ವಹಿಸೋಣ. ನಾವು ಮಾಡುವ ಎಲ್ಲದರಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ನಮ್ಮ ಬದ್ಧತೆ ಮತ್ತು ಸಾಮೂಹಿಕ ಸಾಮರ್ಥ್ಯವನ್ನು ಬಳಸೋಣ ’ಎಂದರು.
ಭಾರತೀಯ ವಾಯುಪಡೆಯು 1932,ಅ.8ರಂದು ಅಧಿಕೃತವಾಗಿ ಸ್ಥಾಪನೆಗೊಂಡಿತ್ತು. ದ್ವೀತೀಯ ಮಹಾಯುದ್ಧದ ಸಮಯದಲ್ಲಿ ಪಡೆಯ ವೃತ್ತಿಪರ ದಕ್ಷತೆ ಮತ್ತು ಸಾಧನೆಗಳನ್ನು ಪರಿಗಣಿಸಿ 1945,ಮಾರ್ಚ್ ನಲ್ಲಿ ಅದಕ್ಕೆ ‘ರಾಯಲ್ ’ ಪೂರ್ವಪ್ರತ್ಯಯವನ್ನು ನೀಡಲಾಗಿತ್ತು. ಹೀಗಾಗಿ ಅದು ರಾಯಲ್ ಇಂಡಿಯನ್ ಏರ್ ಫೋರ್ಸ್ (ಆರ್ಐಎಎಫ್) ಆಗಿತ್ತು.
1950ರಲ್ಲಿ ಭಾರತವು ಗಣರಾಜ್ಯವಾದಾಗ ಐಎಎಫ್ ತನ್ನ ‘ರಾಯಲ್’ ಪೂರ್ವಪ್ರತ್ಯಯವನ್ನು ಕೈಬಿಟ್ಟಿತ್ತು ಮತ್ತು ಧ್ವಜವನ್ನು ತಿದ್ದುಪಡಿಗೊಳಿಸಿತ್ತು.
ಆರ್ಐಎಎಫ್ ಧ್ವಜವು ಎಡ ಮೇಲ್ಭಾಗದಲ್ಲಿ ಯೂನಿಯನ್ ಜ್ಯಾಕ್ನ್ನು ಮತ್ತು ಬಲಗಡೆಯಲ್ಲಿ ಕೆಂಪು,ಬಿಳಿ ಮತ್ತು ನೀಲಿ ಬಣ್ಣಗಳ ವೃತ್ತವನ್ನು ಹೊಂದಿತ್ತು. ಸ್ವಾತಂತ್ರಾನಂತರ ಯೂನಿಯನ್ ಜ್ಯಾಕ್ ಬದಲು ಭಾರತೀಯ ರಾಷ್ಟ್ರಧ್ವಜವನ್ನು ಮತ್ತು ಆರ್ಐಎಎಫ್ ವೃತ್ತದ ಬದಲಿಗೆ ತ್ರಿವರ್ಣ ವೃತ್ತವನ್ನು ಕೆಳ ಬಲಭಾಗದಲ್ಲಿ ಅಳವಡಿಸಲಾಗಿತ್ತು.
ಭಾರತೀಯ ವಾಯುಪಡೆಯ ಮೌಲ್ಯಗಳನ್ನು ಉತ್ತಮವಾಗಿ ಬಿಂಬಿಸಲು ನೂತನ ಐಎಎಫ್ ಧ್ವಜವನ್ನು ಈಗ ರಚಿಸಲಾಗಿದೆ. ಧ್ವಜದ ಮೇಲ್ಭಾಗದ ಮೂಲೆಯಲ್ಲಿ ವಾಯುಪಡೆಯ ಲಾಂಛನವನ್ನು ವಿನ್ಯಾಸಗೊಳಿಸಲಾಗಿದ್ದು, ಅದರ ಕೆಳಗೆ ತ್ರಿವರ್ಣ ವೃತ್ತ ಮತ್ತು ಎಡಭಾಗದ ಮೇಲ್ಗಡೆ ರಾಷ್ಟ್ರಧ್ವಜ ಇದೆ.
ಐಎಎಫ್ ಲಾಂಛನವು ಮೇಲ್ಭಾಗದಲ್ಲಿ ರಾಷ್ಟ್ರೀಯ ಚಿಹ್ನೆ ಅಶೋಕ ಸಿಂಹವನ್ನು ಹೊಂದಿದ್ದು,ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ ‘ಸತ್ಯಮೇವ ಜಯತೆ‘ ಎಂದು ಬರೆಯಲಾಗಿದೆ.
ಅಶೋಕ ಸಿಂಹದ ಕೆಳಗೆ ಐಎಎಫ್ನ ಹೋರಾಟದ ಗುಣಗಳನ್ನು ಸೂಚಿಸುವ ರಕ್ಕೆ ಬಿಚ್ಚಿರುವ ಹಿಮಾಲಯದ ಹದ್ದು ಇದೆ. ‘ಭಾರತೀಯ ವಾಯು ಸೇನಾ’ ಎಂಬ ದೇವನಾಗರಿ ಪದಗಳೊಡನೆ ತಿಳಿ ನೀಲಿಬಣ್ಣದ ವೃತ್ತವು ಹದ್ದನ್ನು ಆವರಿಸಿಕೊಂಡಿದೆ.
ಹಿಮಾಲಯದ ಹದ್ದಿನ ಕೆಳಗೆ ಐಎಎಫ್ ನ ‘ವೈಭವದೊಂದಿಗೆ ಆಕಾಶವನ್ನು ಸ್ಪರ್ಶಿಸಿ ’ ಧ್ಯೇಯವಾಕ್ಯವನ್ನು ದೇವನಾಗರಿ ಲಿಪಿಯಲ್ಲಿ ಮೂಡಿಸಲಾಗಿದೆ. ಈ ಧ್ಯೇಯವಾಕ್ಯವನ್ನು ಭಗವದ್ಗೀತೆಯ ಅಧ್ಯಾಯ 11ರ 24ನೇ ಶ್ಲೋಕದಿಂದ ತೆಗೆದುಕೊಳ್ಳಲಾಗಿದೆ.