×
Ad

ಭಾರತೀಯ ಸಶಸ್ತ್ರ ಪಡೆಗಳು ಈಗಲೂ ಕಾರ್ಯಸನ್ನದ್ಧವಾಗಿವೆ: ಕದನ ವಿರಾಮ ಘೋಷಣೆಯ ಬೆನ್ನಿಗೇ ಭಾರತದ ಹೇಳಿಕೆ

Update: 2025-05-10 20:31 IST

PC : timesofindia.indiatimes.com

ಹೊಸದಿಲ್ಲಿ: ಭೂಮಾರ್ಗ, ವಾಯು ಮಾರ್ಗ ಹಾಗೂ ಸಮುದ್ರ ಮಾರ್ಗದ ಎಲ್ಲ ಸೇನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಪಾಕಿಸ್ತಾನದೊಂದಿಗೆ ಕದನವಿರಾಮ ಒಪ್ಪಂದವೇರ್ಪಟ್ಟ ಬೆನ್ನಿಗೇ, “ಭಾರತೀಯ ಸಶಸ್ತ್ರ ಪಡೆಗಳು ಈಗಲೂ ಕಾರ್ಯಸನ್ನದ್ಧವಾಗಿವೆ” ಎಂದು ಶನಿವಾರ ಭಾರತ ಘೋಷಿಸಿದೆ.

ಪಾಕಿಸ್ತಾನದೊಂದಿಗೆ ಕದನವಿರಾಮ ಒಪ್ಪಂದವೇರ್ಪಟ್ಟ ಬೆನ್ನಿಗೇ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕರ್ನಲ್ ಸೋಫಿಯಾ ಕುರೇಷಿಯೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಮೋಡರ್ ರಘು ಆರ್. ನಾಯರ್, “ಭಾರತೀಯ ಸೇನೆ, ಭಾರತೀಯ ನೌಕಾಪಡೆ ಹಾಗೂ ಭಾರತೀಯ ವಾಯುಪಡೆಯು ಸಂಪೂರ್ಣ ಸನ್ನದ್ಧ ಹಾಗೂ ಜಾಗರೂಕ ಸ್ಥಿತಿಯಲ್ಲಿರುತ್ತವೆ ಹಾಗೂ ತಾಯ್ನೆಲದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ ಎಂಬ ಒಪ್ಪಂದಕ್ಕೆ ನಾವು ಬದ್ಧವಾಗಿರುತ್ತೇವೆ” ಎಂದು ಘೋಷಿಸಿದರು.

“ಪಾಕಿಸ್ತಾನದ ಎಲ್ಲ ದುಸ್ಸಾಹಸಗಳನ್ನು ನಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ಹಿಮ್ಮೆಟ್ಟಿಸಲಾಗಿದೆ. ಭವಿಷ್ಯದ ಪ್ರತಿ ಉದ್ವಿಗ್ನತೆಯೂ ನಿರ್ಣಾಯಕ ಪ್ರತಿಕ್ರಿಯೆಯನ್ನು ಆಮಂತ್ರಿಸಲಿದೆ. ದೇಶದ ರಕ್ಷಣೆಗಾಗಿ ಏನೆಲ್ಲ ಕಾರ್ಯಾಚರಣೆಗಳ ಅಗತ್ಯವಿದೆಯೊ, ಅವೆಲ್ಲವನ್ನೂ ಜಾರಿಗೊಳಿಸಲು ನಾವು ಸಂಪೂರ್ಣವಾಗಿ ಕಾರ್ಯಸನ್ನದ್ಧರಾಗಿದ್ದೇವೆ” ಎಂದೂ ಅವರು ಹೇಳಿದರು.

“ಭೂಮಾರ್ಗ, ಸಮುದ್ರ ಮಾರ್ಗ ಹಾಗೂ ವಾಯು ಮಾರ್ಗದಾದ್ಯಂತ ನಡೆಯುತ್ತಿರುವ ಎಲ್ಲ ಸೇನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ ಒಪ್ಪಂದಕ್ಕೆ ತಲುಪಲಾಗಿದೆ” ಎಂದೂ ಅವರು ತಿಳಿಸಿದರು.

“ಭೂಮಾರ್ಗ, ಸಮುದ್ರ ಮಾರ್ಗ ಹಾಗೂ ವಾಯು ಮಾರ್ಗದಲ್ಲಿನ ಎಲ್ಲ ಸೇನಾ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಒಪ್ಪಂದಕ್ಕೆ ತಲುಪಲಾಗಿದೆ. ಈ ಒಪ್ಪಂದಕ್ಕೆ ಬದ್ಧವಾಗಿರುವಂತೆ ಭಾರತೀಯ ಸೇನೆ, ಭಾರತೀಯ ನೌಕಾಪಡೆ ಹಾಗೂ ಭಾರತೀಯ ವಾಯಪಡೆಗೆ ನಿರ್ದೇಶನ ನೀಡಲಾಗಿದೆ” ಎಂದು ಅವರು ಹೇಳಿದರು.

ಇದಕ್ಕೂ ಮುನ್ನ, ಪತ್ರಿಕಾ ವಿವರಣೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಂ ಮಿಸ್ರಿ, “ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು (ಡಿಜಿಎಂಒ) ಇಂದು ಮಧ್ಯಾದಹ್ನ ಭಾರತೀಯ ಕಾಲಮಾನವಾದ 3.35ಕ್ಕೆ ದೂರವಾಣಿ ಕರೆ ಮಾಡಿದ್ದು, ಈ ವೇಳೆ, ಉಭಯ ಸೇನಾಪಡೆಗಳೂ ಇಂದು ಸಂಜೆ 5 ಗಂಟೆಯಿಂದ ಸೇನಾ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಒಪ್ಪಂದವೇರ್ಪಟ್ಟಿತು” ಎಂದು ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News