ಐಎಎಫ್ ಬಳಿಕ ಭಾರತೀಯ ಸೇನೆಯ ಬತ್ತಳಿಕೆಯನ್ನು ಸೇರಲಿದೆ ವಿಶ್ವದ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್
PC : X
ಹೊಸದಿಲ್ಲಿ: ವಿಶ್ವದ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್ ಗಳನ್ನು ಹೊಂದಲು ಭಾರತಿಯ ಸೇನೆಯ ಕಾಯುವಿಕೆಯು ಶೀಘ್ರವೇ ಕೊನೆಗೊಳ್ಳಬಹುದು. ಆಪರೇಷನ್ ಸಿಂಧೂರದ ಬಳಿಕ ಭಾರತೀಯ ಸೇನೆಯು ಪಶ್ಚಿಮ ಗಡಿಯುದ್ದಕ್ಕೂ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಗಮನವನ್ನು ಕೇಂದ್ರೀಕರಿಸಿದೆ. ಮಾರ್ಚ್ 2024ರಲ್ಲಿ ಜೋಧಪುರದಲ್ಲಿ ಸ್ಥಾಪಿಸಲಾದ ಮೊದಲ ಅಪಾಚೆ ಸ್ಕ್ವಾಡ್ರನ್ ಸನ್ನದ್ಧ ಸ್ಥಿತಿಯಲ್ಲಿದೆ. ಆದರೆ ಹಾರಲು ಯಾವುದೇ ಹೆಲಿಕಾಪ್ಟರ್ ಅದರ ಬಳಿಯಲ್ಲಿಲ್ಲ.
2020ರಲ್ಲಿ ಅಮೆರಿಕ ನಿರ್ಮಿತ ಎಎಚ್-64ಇ ಅಪಾಚೆ ಹೆಲಿಕಾಪ್ಟರ್ ಗಳ ಖರೀದಿಗಾಗಿ 600 ಶತಕೋಟಿ ಡಾಲರ್ ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಕಳೆದ ವರ್ಷವೇ ಅವು ಭಾರತಕ್ಕೆ ಆಗಮಿಸಬೇಕಿದ್ದವು. ಬದಲಿಗೆ ಗಡುವುಗಳು ಪದೇ ಪದೇ ವಿಸ್ತರಣೆಗೊಳ್ಳುತ್ತಲೇ ಇದ್ದವು.
ಒಪ್ಪಂದದ ಪ್ರಕಾರ ಭಾರತವು ತಲಾ ಮೂರರಂತೆ ಎರಡು ತಂಡಗಳಲ್ಲಿ ಆರು ಅಪಾಚೆ ಹೆಲಿಕಾಪ್ಟರ್ ಗಳನ್ನು ಪಡೆಯಲಿದೆ. ಮೊದಲ ತಂಡವು ಮೇ ಅಥವಾ ಜೂನ್ 2024ರಲ್ಲಿ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಪೂರೈಕೆ ಸರಪಳಿಯಲ್ಲಿನ ಅಡಚಣೆಯಿಂದಾಗಿ ಗಡುವನ್ನು ಡಿಸೆಂಬರ್ 2024ಕ್ಕೆ ಮುಂದೂಡಲಾಗಿತ್ತು. ಅಮೆರಿಕದಲ್ಲಿ ತಾಂತ್ರಿಕ ಸಮಸ್ಯೆಗಳು ಪೂರೈಕೆಯನ್ನು ಇನ್ನಷ್ಟು ತಿಂಗಳುಗಳ ಕಾಲ ವಿಳಂಬಿಸಿವೆ.
ಇದೀಗ ಹೆಲಿಕಾಪ್ಟರ್ ಗಳು ಪೂರೈಕೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಕೊನೆಗೂ ಮೂರು ಹೆಲಿಕಾಪ್ಟರ್ ಗಳ ಮೊದಲ ತಂಡವು ಕೆಲವೇ ವಾರಗಳಲ್ಲಿ ಬರಲಿದ್ದು, ಎರಡನೇ ತಂಡವು ಈ ವರ್ಷಾಂತ್ಯದಲ್ಲಿ ಆಗಮಿಸುವ ನಿರೀಕ್ಷೆಯಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.