ತೆಲಂಗಾಣವನ್ನು ಉಲ್ಲೇಖಿಸದೆ ಭಾರತದ ನಕ್ಷೆ ನೀಡಿದ ಆಂಧ್ರ ಬಿಜೆಪಿ ಮುಖ್ಯಸ್ಥ ಮಾಧವ್ : ಬಿಆರ್‌ಎಸ್ ಆಕ್ರೋಶ
Photo | telanganatoday
ಹೈದರಾಬಾದ್ : ಆಂಧ್ರಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಪಿವಿಎನ್ ಮಾಧವ್ ಅವರು ಸಚಿವ ನಾರಾ ಲೋಕೇಶ್ ಅವರಿಗೆ ́ಭಾರತೀಯ ಸಂಸ್ಕೃತಿಯ ವೈಭವʼ ಎಂಬ ಶೀರ್ಷಿಕೆಯ ನಕ್ಷೆಯನ್ನು ನೀಡಿದ್ದು, ಅದರಲ್ಲಿ ತೆಲಂಗಾಣವನ್ನು ಉಲ್ಲೇಖಿಸಲಾಗಿಲ್ಲ ಎಂದು ಬಿಆರ್‌ಎಸ್ ಆರೋಪವನ್ನು ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, ಈ ಲೋಪವು ಬಿಜೆಪಿಯ ರಾಜಕೀಯ ಕಾರ್ಯಸೂಚಿಯೇ ಅಥವಾ ಮುಂದಿನ ಯೋಜನೆಯನ್ನು ಪ್ರತಿಬಿಂಬಿಸುತ್ತದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಬೇಕೆಂದು ಹೇಳಿದ್ದಾರೆ.
ತೆಲಂಗಾಣಕ್ಕೆ ಸಾಂಸ್ಕೃತಿಕ ಗುರುತು, ಇತಿಹಾಸದಲ್ಲಿ ಸರಿಯಾದ ಸ್ಥಾನ ಮತ್ತು ಭೌಗೋಳಿಕ ಮಾನ್ಯತೆಗಾಗಿ ಜನರು ತಲೆಮಾರುಗಳಿಂದ ಹೋರಾಡಿದ್ದಾರೆ ಎಂದು ರಾವ್ ಹೇಳಿದರು.
ಆಂಧ್ರಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷ ಮಾಧವ್ ಅವರು, ತೆಲಂಗಾಣದ ಅಸ್ತಿತ್ವವನ್ನು ನಿರ್ಲಕ್ಷಿಸಿ, ಅಖಂಡ ಆಂಧ್ರಪ್ರದೇಶದ ನಕ್ಷೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ನಮ್ಮ ಹೋರಾಟವನ್ನು ಕಡೆಗಣಿಸಿದ್ದಾರೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು ತೆಲಂಗಾಣದ ಜನರು, ನಮ್ಮ ರಾಜ್ಯ, ನಮ್ಮ ಹೋರಾಟ ಮತ್ತು ನಮ್ಮ ಹುತಾತ್ಮರ ತ್ಯಾಗ ಮತ್ತು ಇತಿಹಾಸವನ್ನು ನಿರ್ಲಕ್ಷ್ಯ ಮಾಡಿರುವುದನ್ನು ಪ್ರತಿಬಿಂಬಿಸುತ್ತದೆ. ಈ ಲೋಪದ ಬಗ್ಗೆ ಬಿಜೆಪಿ ನಾಯಕರು ತೆಲಂಗಾಣದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಕೆ.ಟಿ. ರಾಮರಾವ್ ಒತ್ತಾಯಿಸಿದ್ದಾರೆ.
ಆದರೆ, ಮಾಧವ್ ಅವರು ಈ ನಕ್ಷೆಯು ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಬೇರ್ಪಡಿಸುವ ತೆಳುವಾದ ರೇಖೆಯನ್ನು ಹೊಂದಿರುವ ಕಲಾತ್ಮಕ ಚಿತ್ರವಾಗಿದೆ ಎಂದು ಹೇಳಿದರು.