ಭಾರತೀಯ ನೌಕಾಪಡೆಯ ಫೈಟರ್ ವಿಮಾನಕ್ಕೆ ಪ್ರಪ್ರಥಮ ಮಹಿಳಾ ಪೈಲಟ್!
ಆಸ್ಥಾ ಪೂನಿಯಾ | PC : NDTV
ಹೊಸದಿಲ್ಲಿ: ಭಾರತೀಯ ನೌಕಾಪಡೆಯು ತನ್ನ ಫೈಟರ್ ವಿಮಾನಕ್ಕೆ ಮೊತ್ತ ಮೊದಲ ಬಾರಿಗೆ ಮಹಿಳಾ ಪೈಲಟ್ ಒಬ್ಬರನ್ನು ಶುಕ್ರವಾರ ನಿಯೋಜಿಸಿದೆ. ಸಬ್ ಲೆಫ್ಟಿನೆಂಟ್ ಆಸ್ಥಾ ಪೂನಿಯಾ ಈ ದಾಖಲೆಯನ್ನು ಸ್ಥಾಪಿಸಿದ ನೌಕಾಪಡೆ ಯ ಅಧಿಕಾರಿಯಾಗಿದ್ದಾರೆ. ಆಕೆ ವಿಶಾಖಪಟ್ಟಣಂನ ದೇಗಾದಲ್ಲಿ ತರಬೇತಿ ಪಡೆದಿದ್ದಾರೆ.
ಈ ಬಗ್ಗೆ ಭಾರತೀಯ ನೌಕಾಪಡೆ ಹೇಳಿಕೆಯೊಂದನ್ನು ಪ್ರಕಟಿಸಿದ್ದು, ಸಬ್ ಲೆಫ್ಟಿನೆಂಟ್ ಆಸ್ಥಾ ಪೂನಿಯಾ ಅವರು ನೌಕಾಪಡೆಯ ಫೈಟರ್ ವಿಮಾನಗಳ ಪೈಲಟ್ ಆಗಿ ನಿಯೋಜನೆಗೊಂಡಿದ್ದಾರೆ. ಆ ಮೂಲಕ ಎಲ್ಲಾ ತಡೆಬೇಲಿಗಳನ್ನು ಮುರಿದಿರುವ ಅವರು, ನೌಕಾಪಡೆಯಲ್ಲಿ ಮಹಿಳಾ ಫೈಟರ್ ಪೈಲಟ್‌ಗಳ ಹೊಸ ಯುಗಕ್ಕೆ ದಾರಿ ಮಾಡಿಕೊಟ್ಟಿದ್ದಾರೆ’’ ಎಂದು ಹೇಳಿದೆ.
ಭಾರತೀಯ ನೌಕಾಪಡೆಯು ಈಗಾಗಲೇ ತನ್ನ ಮಧ್ಯಮವ್ಯಾಪ್ತಿಯ ವಿಮಾನ ಹಾಗೂ ಹೆಲಿಕಾಪ್ಟರ್‌ಗಳಿಗೆ ಮಹಿಳಾ ಅಧಿಕಾರಿಗಳನ್ನು ಪೈಲಟ್ ಗಳಾಗಿ ಹಾಗೂ ನೌಕಾಪಡೆಯ ವೈಮಾನಿಕ ಕಾರ್ಯಾಚರಣೆಗಳ ಅಧಿಕಾರಿಗಳಾಗಿ ನೇಮಕಗೊಳಿಸಿತ್ತು. ಆದರೆ ಫೈಟರ್ ವಿಮಾನಗಳ ಪೈಲಟ್ ಆಗಿ ಮಹಿಳೆಯನ್ನು ನೇಮಕಗೊಳಿಸಿರುವುದು ಇದೇ ಮೊದಲ ಸಲವಾಗಿದೆ.
ಯುದ್ಧ ವಿಮಾನದ ಪೈಲಟ್ ಆಗಿ ನಿಯೋಜಿತರಾದ ಹಿನ್ನೆಲೆಯಲ್ಲಿ ಸಬ್ ಲೆಫ್ಟಿನೆಂಟ್ ಆಸ್ಥಾ ಪೂನಿಯಾ ಅವರು ಲೆಫ್ಟಿನೆಂಟ್ ಅತುಲ್ ಕುಮಾರ್ ಧುಲ್ ಜೊತೆಗೆ ಪ್ರತಿಷ್ಠಿತ ‘ವಿಂಗ್ಸ್ ಆಫ್ ಗೋಲ್ಡ್’ ಪುರಸ್ಕಾರವನ್ನು ನೌಕಾಪಡೆಯ ವೈಮಾನಿಕ ದಳದ ಸಹ ಮುಖ್ಯಸ್ಥ ರಿಯರ್ ಆಡ್ಮಿರಲ್ ಜಾನಕ್ ಬೆವಿಲಿ ಅವರಿಂದ ಸ್ವೀಕರಿಸಿದರು.
‘‘ಫೈಟರ್ ವಿಮಾನಗಳ ಶ್ರೇಣಿಗೆ ಸಬ್ ಲೆಫ್ಟಿನೆಂಟ್ ಆಸ್ಥಾ ಪೂನಿಯಾ ಅವರ ನಿಯೋಜನೆಯು ನೌಕಾಪಡೆಯ ವೈಮಾನಿಕ ದಳದಲ್ಲಿ ಲಿಂಗಭೇದ ರಹಿತ ಒಳಗೊಳ್ಳುವಿಕೆ ಹಾಗೂ ನಾರಿಶಕ್ತಿಗೆ ಉತ್ತೇಜನ, ಸಮಾನತೆ ಹಾಗೂ ಅವಕಾಶಗಳ ಸಂಸ್ಕೃತಿಯ ಪೋಷಣೆ ಇವುಗಳ ಬಗ್ಗೆ ಬೆಳಕು ಚೆಲ್ಲಿದೆ.
ಭಾರತೀಯ ವಾಯುಪಡೆಯು 2016ರಲ್ಲಿಯೇ ತನ್ನ ಯುದ್ಧ ವಿಮಾನಗಳಿಗೆ ಪ್ರಥಮ ಬಾರಿಗೆ ಮೂವರು ಮಹಿಳಾ ಪೈಲಟ್‌ಗಳನ್ನು ನಿಯೋಜಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿತ್ತು. ಅವನಿ ಚತುರ್ವೇದಿ, ಭಾವನಾ ಕಾಂತ ಹಾಗೂ ಮೋಹನಾ ಸಿಂಗ್ ಅವರನ್ನು ವಾಯುಪಡೆಯ ಯುದ್ಧವಿಮಾನಗಳ ಪೈಲಟ್ ಆಗಿ ನಿಯೋಜನೆಗೊಂಡಿದ್ದರು.