×
Ad

ಭಯೋತ್ಪಾದನೆಗೆ ನೆರವು ನೀಡುವುದನ್ನು ಅಂತ್ಯಗೊಳಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿ: ಟರ್ಕಿಗೆ ಭಾರತದ ಕಠಿಣ ಸಂದೇಶ

Update: 2025-05-22 22:34 IST

Photo: ANI

ಹೊಸದಿಲ್ಲಿ: ಅಂತರ್ ಗಡಿ ಭಯೋತ್ಪಾದನೆಗೆ ನೀಡುತ್ತಿರುವ ನೆರವನ್ನು ಅಂತ್ಯಗೊಳಿಸಬೇಕು ಹಾಗೂ ಭಯೋತ್ಪಾದಕರ ತಾಣಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನವನ್ನು ಟರ್ಕಿ ಬಲವಾಗಿ ಆಗ್ರಹಿಸಬೇಕು ಎಂದು ನಾವು ಬಯಸುತ್ತೇವೆ ಎಂದು ಭಾರತ ಸರಕಾರವು ಗುರುವಾರ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಅಂತರ್ ಗಡಿ ಭಯೋತ್ಪಾದನೆ ನೀಡುತ್ತಿರುವ ನೆರವನ್ನು ಅಂತ್ಯಗೊಳಿಸಬೇಕು. ದಶಕಗಳಿಂದ ತಾನು ಪೋಷಿಸುತ್ತಿರುವ ಭಯೋತ್ಪಾದಕರ ತಾಣಗಳ ಮೇಲೆ ವಿಶ್ವಸನೀಯ ಹಾಗೂ ಪರಿಶೀಲಿಸಬಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಾಕಿಸ್ತಾನವನ್ನು ಟರ್ಕಿಯು ಬಲವಾಗಿ ಆಗ್ರಹಿಸಬೇಕು ಎಂದು ನಾವು ಬಯಸುತ್ತೇವೆ”, ಎಂದು ಹೇಳಿದ್ದಾರೆ.

ಒಂಭತ್ತು ವಿಮಾನ ನಿಲ್ದಾಣಗಳಲ್ಲಿ ಕ್ಷೇತ್ರಾಧಾರಿತ ಸೇವೆಗಳನ್ನು ನಿರ್ವಹಿಸುತ್ತಿರುವ ಟರ್ಕಿ ಸ್ಥಾಪಿಸಿರುವ ಸೆಲೆಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಗೆ ವಿಧಿಸಲಾಗಿದ್ದ ಭದ್ರತಾ ಅನುಮತಿ ನಿರ್ಬಂಧವನ್ನು ನಾಗರಿಕ ವಿಮಾನ ಯಾನ ಭದ್ರತಾ ದಳವು ಹಿಂದೆಗೆದುಕೊಂಡಿರುವ ಕುರಿತು ಕೇಳಲಾದ ಪ್ರಶ್ನೆಗೆ, ಈ ವಿಷಯವನ್ನು ಭಾರತದಲ್ಲಿನ ಟರ್ಕಿ ರಾಯಭಾರ ಕಚೇರಿಯೊಂದಿಗೆ ಚರ್ಚಿಸಲಾಗಿದೆ ಎಂದು ಅವರು ಉತ್ತರಿಸಿದ್ದಾರೆ.

“ಸೆಲೆಬಿ ವಿಷಯವನ್ನು ಇಲ್ಲಿನ ಟರ್ಕಿ ರಾಜತಾಂತ್ರಿಕ ಕಚೇರಿಯೊಂದಿಗೆ ಚರ್ಚಿಸಲಾಗಿದೆ. ಆದರೆ, ಈ ನಿರ್ದಿಷ್ಟ ನಿರ್ಧಾರವನ್ನು ನಾಗರಿಕ ವಿಮಾನ ಯಾನ ಭದ್ರತಾ ದಳ ತೆಗೆದುಕೊಂಡಿದೆ ಎಂದು ನನಗೆ ತಿಳಿದು ಬಂದಿದೆ” ಎಂದೂ ಅವರು ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀಜರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ್ದ ದಾಳಿಯನ್ನು ಟರ್ಕಿ ಖಂಡಿಸಿದ ನಂತರ, ಭಾರತ ಮತ್ತು ಟರ್ಕಿ ನಡುವಿನ ರಾಜತಾಂತ್ರಿಕ ಸಂಬಂಧಗಳು ಬಿಗಡಾಯಿಸಿರುವ ಹೊತ್ತಿನಲ್ಲಿ ಈ ಹೇಳಿಕೆ ಹೊರ ಬಿದ್ದಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ, ಪಾಕಿಸ್ತಾನವು ಟರ್ಕಿ ನಿರ್ಮಿತ ಡ್ರೋನ್ ಗಳನ್ನು ಭಾರಿ ಪ್ರಮಾಣದಲ್ಲಿ ಬಳಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News