ನೌಕಾಪಡೆಗೆ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿರೋಧಕ ಹಡಗು ‘ಆಂದ್ರೋತ್ ’ಸೇರ್ಪಡೆ
PC | indiatoday.in
ಹೊಸದಿಲ್ಲಿ,ಸೆ.14: ಭಾರತೀಯ ನೌಕಾಪಡೆಗೆ ಪೂರೈಕೆಯಾಗಲಿರುವ ಸ್ವದೇಶಿ ನಿರ್ಮಿತ 8 ಜಲಾಂತರ್ಗಾಮಿ ನಿರೋಧಕ ಸಮರಕೌಶಲ್ಯದ ಕಡಿಮೆ ಆಳದ ಹಡಗುಗಳ (ಎಎಸ್‌ಡಬ್ಲ್ಯು ಎಸ್‌ಡಬ್ಲ್ಯುಸಿಗಳು) ಪೈಕಿ ಎರಡನೆಯದನ್ನು ರವಿವಾರ ಸ್ವೀಕರಿಸಿದೆ.
ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲ್ ಸ್ವಾವಲಂಬನೆಯೆಡೆಗೆ ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗಿರುವ ಈ ನೌಕೆಗಳನ್ನು ಕೋಲ್ಕತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ (ಜಿಆರ್‌ಎಸ್‌ಇ) ನಿರ್ಮಿಸುತ್ತಿದೆ.
ಲಕ್ಷದ್ವೀಪ ಸಮೂಹದ ದ್ವೀಪಗಳಲ್ಲೊಂದಾದ ‘ಅಂದ್ರೋತ್’ನ ಹೆಸರನ್ನು ಈ ಹಡಗಿಗೆ ಇಡಲಾಗಿದೆ. 77 ಮೀಟರ್ ವಿಸ್ತೀರ್ಣದ ಈ ಹಡಗು ಡೀಸೆಲ್-ವಾಟರ್‌ಜೆಟ್ ಸಂಯೋಜನೆಯಿಂದ ಚಲಿಸುವ ಬೃಹತ್ ಸಮರ ನೌಕೆಗಳಲ್ಲೊಂದಾಗಿದೆ.
ಸಂಪೂರ್ಣ ಸ್ವದೇಶಿಯಾಗಿ ವಿನ್ಯಾಸಗೊಳಿಸಿ ಈ ನೌಕೆಗಳನ್ನು ಭಾರತೀಯ ಹಡಗುಗಾರಿಕೆ ನೋಂದಣಿ ವರ್ಗೀಕೃತ ನಿಯಮಗಳಿಗೆ ಅನುಗುಣವಾಗಿ ಆಂದ್ರೋತ್ ನಿರ್ಮಾಣಗೊಂಡಿದೆೆ. ಈ ಹಡಗುಗಳ ನಿಯೋಜನೆಯಿಂದಾಗಿ ನೌಕಾಪಡೆಯ ಜಲಾಂತರ್ಗಾಮಿ ನಿರೋಧಕ,ಕರಾವಳಿ ಕಣ್ಗಾವಲು ಮತ್ತು ಸ್ಫೋಟಕಗಳ ಅಳವಡಿಕೆ (ಮೈನ್ ಲೇಯಿಂಗ್) ಸಾಮರ್ಥ್ಯವನ್ನು ಹೆಚ್ಚಿಸಲಿವೆ.
ಅತ್ಯಾಧುನಿಕ ಲಘುಭಾರದ ಟೊರ್ಪೆಡೊಗಳು, ಸ್ವದೇಶಿ ನಿರ್ಮಿತ ಎಎಸ್‌ಡಬ್ಲ್ಯು ರಾಕೆಟ್‌ಗಳು ಹಾಗೂ ಅತ್ಯಂತ ಸುಧಾರಿತ ಕಡಿಮೆ ಆಳದ ಸೋನಾರ್ ಸಲಕರಣೆಗಳಿಂದ ಸಜ್ಜಿತವಾದ ಆಂದ್ರೋತ್ ಹಡಗು ತೀರಪ್ರದೇಶಗಳಲ್ಲಿ ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚುವ ಮತ್ತು ದಾಳಿ ಸಾಮರ್ಥ್ಯ ಹೊಂದಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.