ಇಂಡಿಗೊ ಮೊದಲಿನ ಸ್ಥಿತಿಗೆ ಮರಳಿದೆ, ಕಾರ್ಯಾಚರಣೆಗಳು ಸ್ಥಿರವಾಗಿವೆ:ಸಿಇಒ
“ನಮ್ಮ ಕ್ಷಮಾಯಾಚನೆಯನ್ನು ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು”
ಪೀಟರ್ ಅಲ್ಬರ್ಸ್ | Photo Credit : NDTV
ಹೊಸದಿಲ್ಲಿ,ಡಿ.9: ಕಳೆದ ಎಂಟು ದಿನಗಳಿಂದ ದೇಶಾದ್ಯಂತ ವಿಮಾನಯಾನಗಳನ್ನು ರದ್ದುಗೊಳಿಸುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ಭಾರೀ ಬಿಕಟ್ಟನ್ನು ಸೃಷ್ಟಿಸಿರುವ ಇಂಡಿಗೊ ಈಗ ‘ಮೊದಲಿನ ಸ್ಥಿತಿಗೆ ಮರಳಿದೆ’ ಎಂದು ಕಂಪೆನಿಯ ಸಿಇಒ ಪೀಟರ್ ಅಲ್ಬರ್ಸ್ ಮಂಗಳವಾರ ಹೇಳಿಕೊಂಡಿದ್ದಾರೆ.
‘ನಮ್ಮ ಕ್ಷಮಾಯಾಚನೆಯನ್ನು ಸ್ವೀಕರಿಸಿದ್ದಕ್ಕಾಗಿ’ ಹಾಗೂ ಮತ್ತೆ ಇಂಡಿಗೊ ಟಿಕೆಟ್ಗಳನ್ನು ಬುಕ್ ಮಾಡುತ್ತಿರುವುದಕ್ಕಾಗಿ ಗ್ರಾಹಕರಿಗೆ ಧನ್ಯವಾದಗಳು ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ನಮ್ಮ ಕಾರ್ಯಾಚರಣೆಗಳಲ್ಲಿ ಭಾರೀ ಅಡಚಣೆಯುಂಟಾದಾಗ ನಾವು ನಿಮ್ಮನ್ನು ತೊಂದರೆಗೀಡು ಮಾಡಿದ್ದೆವು ಮತ್ತು ಅದಕ್ಕಾಗಿ ನಾವು ವಿಷಾದಿಸುತ್ತೇವೆ’ ಎಂದು ಅಲ್ಬರ್ಸ್ ಹೇಳಿದ್ದಾರೆ.
‘ಡಿ.5ರಂದು ಕೇವಲ 700 ವಿಮಾನಯಾನಗಳನ್ನು ನಿರ್ವಹಿಸಲು ಇಂಡಿಗೊಕ್ಕೆ ಸಾಧ್ಯವಾಗಿತ್ತು. ಆ ಬಳಿಕ ಕ್ರಮೇಣವಾಗಿ,ಆದರೆ ಸ್ಥಿರವಾಗಿ ಸುಧಾರಿಸಿಕೊಂಡಿದೆ. ಡಿ.6ರಂದು 1,500,ಡಿ.7ರಂದು 1650,ಡಿ.8ರಂದು 1,800 ಮತ್ತ ಇಂದು 1,800ಕ್ಕೂ ಅಧಿಕ ಯಾನಗಳನ್ನು ನಿರ್ವಹಿಸಲಾಗಿದೆ. ನಿನ್ನೆಯಿಂದ ನಾವು ನಮ್ಮ ನೆಟ್ ವರ್ಕ್ ನಲ್ಲಿಯ ಎಲ್ಲ 138 ನಗರಗಳಿಗೆ ಯಾನಗಳನ್ನು ನಿರ್ವಹಿಸುತ್ತಿದ್ದೇವೆ ಮತ್ತು ನಮ್ಮ ಸಮಯ ಪಾಲನೆಯೂ ಸಹಜ ಸ್ಥಿತಿಗೆ ಮರಳಿದೆ ’ಎಂದು ತಿಳಿಸಿದ್ದಾರೆ.