ಇಂಡಿಗೋ ಬಿಕ್ಕಟ್ಟು: 11 ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಡಿಜಿಸಿಎ ಆದೇಶ
ಇಂಡಿಗೊ ವಿಮಾನ | Photo Credit : PTI
ಹೊಸದಿಲ್ಲಿ, ಡಿ. 10: ಇಂಡಿಗೊ ವಿಮಾನಗಳ ಯಾನಗಳಲ್ಲಿ ಸಂಭವಿಸಿದ ಬೃಹತ್ ಪ್ರಮಾಣದ ಅಸ್ತವ್ಯಸ್ತತೆಯ ಹಿನ್ನೆಲೆಯಲ್ಲಿ, ದೇಶಾದ್ಯಂತವಿರುವ 11 ವಿಮಾನ ನಿಲ್ದಾಣಗಳಲ್ಲಿ ತಕ್ಷಣ ತಪಾಸಣೆ ನಡೆಸುವಂತೆ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತನ್ನ ಅಧಿಕಾರಿಗಳಿಗೆ ಬುಧವಾರ ಆದೇಶಿಸಿದೆ.
ವಿಮಾನ ನಿಲ್ದಾಣಗಳಿಗೆ ಎರಡು- ಮೂರು ದಿನಗಳಲ್ಲಿ ಭೇಟಿ ನೀಡಬೇಕು ಹಾಗೂ ತಪಾಸಣೆ ಮುಗಿಸಿದ ಬಳಿಕ 24 ಗಂಟೆಗಳಲ್ಲಿ ತನಗೆ ವರದಿ ಸಲ್ಲಿಸಬೇಕು ಎಂದು ಡಿಜಿಸಿಎ ಅಧಿಕಾರಿಗಳಿಗೆ ಸೂಚಿಸಿದೆ.
ತಪಾಸಣೆ ನಡೆಯುವ ವಿಮಾನ ನಿಲ್ದಾಣಗಳೆಂದರೆ- ನಾಗಪುರ, ಜೈಪುರ, ಭೋಪಾಲ್, ಸೂರತ್, ತಿರುಪತಿ, ವಿಜಯವಾಡ, ಶಿರ್ಡಿ, ಕೊಚ್ಚಿ, ಲಕ್ನೋ, ಅಮೃತಸರ ಮತ್ತು ಡೆಹ್ರಾಡೂನ್.
ಈ ವಿಮಾನ ನಿಲ್ದಾಣಗಳ ಸುರಕ್ಷತಾ ಸಿದ್ಧತೆ, ಕಾರ್ಯನಿರ್ವಹಣಾ ತಯಾರಿ, ಪ್ರಯಾಣಿಕರ ಸೌಕರ್ಯಗಳ ಗುಣಮಟ್ಟ ಮತ್ತು ಹಾಲಿ ವಿಮಾನ ಸಂಚಾರ ಅಸ್ಯವ್ಯಸ್ತತೆಯನ್ನು ಇಂಡಿಗೋ ನಿಭಾಯಿಸಿದ ರೀತಿಯನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
ವಿಮಾನಯಾನಗಳ ವಿಳಂಬ ಮತ್ತು ರದ್ದತಿಗಳು, ವಿಮಾನ ನಿಲ್ದಾಣಗಳಲ್ಲಿನ ಜನಸಂದಣಿ, ವಿಮಾನಗಳಿಗೆ ಪ್ರವೇಶ ನೀಡುವ ಕೌಂಟರ್ ಗಳಲ್ಲಿ ಜನರ ಸಾಲುಗಳ ನಿರ್ವಹಣೆ, ಭದ್ರತಾ ಸ್ಥಳಗಳು ಮತ್ತು ವಿಮನ ಹತ್ತುವ ದ್ವಾರಗಳು ಹಾಗೂ ಇಂಡಿಗೋ ಮತ್ತು ವಿಮಾನ ನಿಲ್ದಾಣವು ನಿಯೋಜಿಸಿದ ಸಿಬ್ಬಂದಿಯು ಪ್ರಯಾಣಿಕರನ್ನು ನಿಭಾಯಿಸಲು ಸಾಕಾಗುವಷ್ಟಿತ್ತೇ ಎಂಬ ವಿಷಯಗಳನ್ನು ಅಧಿಕಾರಿಗಳು ನಿಕಟವಾಗಿ ಪರಿಶೀಲಿಸಲಿದ್ದಾರೆ.