ಇಂಡಿಗೋ ಬಿಕ್ಕಟ್ಟು | ಪೈಲಟ್ ಗಳ ವಾರದ ವಿಶ್ರಾಂತಿ ಆದೇಶ ಹಿಂದೆಗೆದುಕೊಂಡ DGCA
Photo Credit : PTI
ಹೊಸದಿಲ್ಲಿ,ಡಿ.5: ದೇಶದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋವನ್ನು ಕಾಡುತ್ತಿರುವ ಕಾರ್ಯಾಚರಣೆ ಬಿಕ್ಕಟ್ಟನ್ನು ಪರಿಹರಿಸಲು ನಾಗರಿಕ ವಾಯುಯಾನ ಮಹಾನಿರ್ದೇಶನಾಲಯವು (DGCA) ಹಾರಾಟ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ನಿಯಮಾವಳಿಯ ‘ವಾರದ ವಿಶ್ರಾಂತಿಗಾಗಿ ರಜೆಯನ್ನು ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ’ ಎಂಬ ನಿಬಂಧನೆಯನ್ನು ಶುಕ್ರವಾರ ಹಿಂದೆಗೆದುಕೊಂಡಿದೆ. ಈ ನಿಯಮಾವಳಿಯ ಮೊದಲ ಹಂತ ಜು.1ರಂದು ಮತ್ತು ಎರಡನೇ ಹಂತ ನ.1ರಂದು ಜಾರಿಗೊಂಡಿದ್ದವು.
ಪ್ರಸಕ್ತ ಕಾರ್ಯಾಚರಣೆಯಲ್ಲಿ ಉಂಟಾಗಿರುವ ವ್ಯತ್ಯಯಗಳು ಹಾಗೂ ಕಾರ್ಯಾಚರಣೆಗಳ ನಿರಂತರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯ ಕುರಿತು ವಿವಿಧ ವಿಮಾನಯಾನ ಸಂಸ್ಥೆಗಳ ಅಹವಾಲುಗಳ ಹಿನ್ನೆಲೆಯಲ್ಲಿ ಸದ್ರಿ ನಿಬಂಧನೆಯನ್ನು ಪುನರ್ ಪರಿಶೀಲಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ ಎಂದು DGCA ಶುಕ್ರವಾರ ಅಪರಾಹ್ನ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ರಾತ್ರಿ ವೇಳೆಯ ವಿಮಾನಯಾನಗಳಿಗೆ ಫೆ.10ರವರೆಗೆ ವಿನಾಯಿತಿಯ ಪ್ರಸ್ತಾವವನ್ನೂ ಮುಂದಿರಿಸಿರುವ DGCA, ಆದರೆ ವಿಮಾನಯಾನ ಸಂಸ್ಥೆಯು ಪ್ರತಿ 15 ದಿನಗಳಿಗೊಮ್ಮೆ ಪುನರ್‌ಪರಿಶೀಲನೆಯನ್ನು ಎದುರಿಸಬೇಕು ಮತ್ತು ನಿಯಮಗಳಿಗೆ ‘ಸಂಪೂರ್ಣ ಅನುಸರಣೆ’ಯನ್ನು ತೋರಿಸಲು 30 ದಿನಗಳ ಮಾರ್ಗಸೂಚಿಯನ್ನು ಸಲ್ಲಿಸಬೇಕು ಎಂದು ಹೇಳಿದೆ.
ಇಂದಿನ ಎಫ್‌ಡಿಟಿಎಲ್ ನಿಯಮಗಳ ಪರಿಷ್ಕರಣೆಯಿಂದಾಗಿ ವಿಮಾನಯಾನ ಸಂಸ್ಥೆಗಳು ಪೈಲಟ್ ಗಳು ಮತ್ತು ಹಾರಾಟ ಸಿಬ್ಬಂದಿಯನ್ನು ನಿಯೋಜಿಸುವಾಗ ರಜೆ ಮತ್ತು ಸಾಪ್ತಾಹಿಕ ವಿಶ್ರಾಂತಿ ಅವಧಿಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಿಲ್ಲ. ನೂತನ ನಿಯಮಗಳ ಪ್ರಕಾರ 48 ಗಂಟೆಗಳ ಗಳಿಕೆ ರಜೆಯನ್ನು ಪಡೆದ ಪೈಲಟ್ ವಾರದ ವಿಶ್ರಾಂತಿಯನ್ನೂ ಪಡೆದಿದ್ದಾರೆ ಎಂದು ಪರಿಗಣಿಸಲಾಗುವುದು.
ಗುರುವಾರ ರಾತ್ರಿ ಓರ್ವ ಪೈಲಟ್ ಹಾರಾಟ ನಡೆಸಬಹುದಾದ ನಿರಂತರ ಗಂಟೆಗಳನ್ನು 12ರಿಂದ 14ಕ್ಕೆ ಹೆಚ್ಚಿಸಲಾಗಿತ್ತು. ಇದರ ಬೆನ್ನಲ್ಲೇ ಇಂದಿನ ಪರಿಷ್ಕರಣೆಗಳು ಹೊರಬಿದ್ದಿವೆ.
2,200ಕ್ಕೂ ಅಧಿಕ ದೇಶೀಯ ಮತ್ತು ಅಂತರರಾಷ್ಟ್ರೀಯ ಯಾನಗಳನ್ನು ನಿರ್ವಹಿಸುತ್ತಿರುವ ಇಂಡಿಗೋದ ಕಾರ್ಯಾಚರಣೆಗಳು ಸಿಬ್ಬಂದಿ ಕೊರತೆಯಿಂದಾಗಿ ಕಳೆದ ನಾಲ್ಕು ದಿನಗಳಲ್ಲಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ.
ನೂತನ ಎಫ್‌ಡಿಟಿಎಲ್ ನಿಯಮಗಳಡಿ ಅಗತ್ಯವಿರುವ ಪೈಲಟ್‌ಗಳ ಸಂಖ್ಯೆಯನ್ನು ತಾನು ತಪ್ಪಾಗಿ ನಿರ್ಧರಿಸಿದ್ದೆ ಎಂದು ಇಂಡಿಗೋ ಬುಧವಾರ ಒಪ್ಪಿಕೊಂಡಿತ್ತು. ಈ ನಿಯಮಗಳು ವಾರದ ವಿಶ್ರಾಂತಿ ಅವಧಿಯನ್ನೂ 36 ಗಂಟೆಗಳಿಂದ 48 ಗಂಟೆಗಳಿಗೆ ಹೆಚ್ಚಿಸಿದ್ದವು.
ಇಂಡಿಗೋ ಗುರುವಾರ ದಿಲ್ಲಿ ಸೇರಿದಂತೆ ದೇಶದ ವಿವಿಧ ವಿಮಾನ ನಿಲ್ದಾಣಗಳಿಂದ ತನ್ನ 550 ಯಾನಗಳನ್ನು ರದ್ದುಗೊಳಿಸಿತ್ತು.
ಇಂಡಿಗೋ ಈವರೆಗೆ ಒಟ್ಟೂ ಸುಮಾರು 1,300 ಯಾನಗಳನ್ನು ರದ್ದುಗೊಳಿಸಿದ್ದು, ಅಲ್ಪಾವಧಿಯಲ್ಲಿ ಪರಿಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಇಂಡಿಗೋ ಈಗಾಗಲೇ ಕನಿಷ್ಠ ಡಿ.8ರವರೆಗೆ ಇನ್ನಷ್ಟು ವ್ಯತ್ಯಯಗಳುಂಟಾಗುವ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.
ದಿಲ್ಲಿ ವಿಮಾನ ನಿಲ್ದಾಣವು ಶುಕ್ರವಾರ ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಇಂಡಿಗೋದ ಎಲ್ಲ ನಿರ್ಗಮನ ಯಾನಗಳನ್ನು ರದ್ದುಗೊಳಿಸಿದ್ದು, ಸಂಸ್ಥೆಯ ತಪ್ಪುನಿರ್ಧಾರ ಎಷ್ಟೊಂದು ದುಬಾರಿಯಾಗಿ ಪರಿಣಮಿಸಿದೆ ಎನ್ನುವುದನ್ನು ಇದು ತೋರಿಸಿದೆ.
ಕಾರ್ಯಾಚರಣೆ ಸಮಸ್ಯೆಯಿಂದಾಗಿ ಚೆನ್ನೈನಿಂದ ಬೆಂಗಳೂರು, ಮುಂಬೈ, ದಿಲ್ಲಿ, ಕೋಲ್ಕತಾ ಮತ್ತು ಹೈದರಾಬಾದ್ ಗೆ ಇಂಡಿಗೋ ಯಾನಗಳನ್ನು ಶುಕ್ರವಾರ ಸಂಜೆ ಆರು ಗಂಟೆಯವರೆಗೆ ರದ್ದುಗೊಳಿಸಲಾಗಿತ್ತು.
ಶುಕ್ರವಾರ ಸಂಜೆ ಇಂಡಿಗೋ ಮತ್ತೊಮ್ಮೆ ತನ್ನ ಗ್ರಾಹಕರಲ್ಲಿ ಕ್ಷಮೆ ಯಾಚಿಸಿದೆ.