IndiGo ಬಿಕ್ಕಟ್ಟು ಪ್ರಕರಣ: ಸರಕಾರ ಸ್ಪಂದಿಸಿದೆ, ತುರ್ತು ವಿಚಾರಣೆ ಬೇಕಿಲ್ಲ: ಸುಪ್ರೀಂ ಕೋರ್ಟ್
Photo Credit : PTI
ಹೊಸದಿಲ್ಲಿ: ಇಂಡಿಗೊ ವಿಮಾನಯಾನ ಸಂಸ್ಥೆಯ ನೂರಾರು ವಿಮಾನಗಳು ರದ್ದಾದ ಪರಿಣಾಮ ದೇಶದಾದ್ಯಂತ ಪ್ರಯಾಣಿಕರು ಅನುಭವಿಸಿದ ತೊಂದರೆಯನ್ನು ಉಲ್ಲೇಖಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಯ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ. ಸರ್ಕಾರ ಈಗಾಗಲೇ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಂಡಿರುವುದರಿಂದ ತುರ್ತು ವಿಚಾರಣೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರ ಪರ ವಕೀಲರು, ಹಲವು ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಪೀಠದ ಗಮನಕ್ಕೆ ತಂದರು. ಆರೋಗ್ಯ ಸಮಸ್ಯೆ ಹೊಂದಿದವರು, ತುರ್ತು ಕಾರಣಗಳಿಂದ ವಿಮಾನ ಪ್ರಯಾಣ ಆರಿಸಿಕೊಂಡವರು ಹೆಚ್ಚಿನ ಸಂಕಷ್ಟ ಅನುಭವಿಸಿದ್ದಾರೆ. ಇಂಡಿಗೊ ಸಂಸ್ಥೆ ಕೊನೆಯ ಕ್ಷಣದವರೆಗೂ ವಿಮಾನ ಹಾರಾಟ ರದ್ದಾದ ಮಾಹಿತಿಯನ್ನು ನೀಡದಿರುವುದು ಗಂಭೀರ ನಿರ್ಲಕ್ಷ್ಯವಾಗಿದ್ದು, ಸುಮಾರು 2,500 ವಿಮಾನಗಳು ರದ್ದಾಗಿರುವುದರಿಂದ 95 ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ಉಂಟಾಗಿದೆ ಎಂದು ವಕೀಲರು ವಾದಿಸಿದರು.
ಇಂಡಿಗೊ ಸಂಸ್ಥೆಯಲ್ಲಿ ಉಂಟಾದ ಈ ವ್ಯತ್ಯಯಕ್ಕೆ ಪೈಲೆಟ್ ಗಳ ಕೆಲಸದ ಹೊರೆ ಮತ್ತು ವಿಶ್ರಾಂತಿ ಅವಧಿಗೆ ಸಂಬಂಧಿಸಿದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಹೊಸ ನಿಯಮಾವಳಿ ಕಾರಣ ಎನ್ನಲಾಗಿದೆ3 ಡಿಸೆಂಬರ್ 2ರಿಂದ ಜಾರಿಗೆ ಬಂದಿರುವ ಈ ನಿಯಮದಿಂದ ಕಾರ್ಯಾಚರಣೆಯು ಗೊಂದಲಕ್ಕೆ ಸಿಲುಕಿದ್ದು, ಪ್ರಯಾಣಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಹಾರಾಟ ವ್ಯತ್ಯಯದ ಪರಿಣಾಮವಾಗಿ ಸೋಮವಾರ ಷೇರುಪೇಟೆಯಲ್ಲಿ ಇಂಡಿಗೊ ಷೇರು ಮೌಲ್ಯವೂ ಕುಸಿದಿದೆ.