ಇಲಿಯಿಂದಾಗಿ 3 ಗಂಟೆ ತಡವಾಗಿ ಸಂಚರಿಸಿದ ಇಂಡಿಗೊ ವಿಮಾನ
ಇಂಡಿಗೊ ವಿಮಾನ | PC : PTI
ಲಕ್ನೋ, ಸೆ. 22: ಕಾನ್ಪುರ ವಿಮಾನ ನಿಲ್ದಾಣದಲ್ಲಿ ಇಂಡಿಗೊ ವಿಮಾನದಲ್ಲಿ ಸೋಮವಾರ ಇಲಿ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನ ಸುಮಾರು 3 ಗಂಟೆಗಳ ಕಾಲ ವಿಳಂಬವಾಗಿ ಸಂಚರಿಸಿತು.
ಇಂಡಿಗೊ ವಿಮಾನ ದಿಲ್ಲಿಯಿಂದ ಕಾನ್ಪುರಕ್ಕೆ ಅಪರಾಹ್ನ 2.10ಕ್ಕೆ ಆಗಮಿಸಿತು. ಅದು ಅಪರಾಹ್ನ 2.50ಕ್ಕೆ ದಿಲ್ಲಿಗೆ ಹೊರಡಬೇಕಿತ್ತು. ಆದರೆ, ವಿಮಾನ ಹಾರಾಟ ಆರಂಭಿಸುವ ಮುನ್ನ ಸಿಬ್ಬಂದಿ ಕ್ಯಾಬಿನ್‌ನ ಒಳಗಡೆ ಇಲಿಯೊಂದನ್ನು ಗುರುತಿಸಿದರು. ಈ ಹಿನ್ನೆಲೆಯಲ್ಲಿ ವಿಮಾನದ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಕೂಡಲೇ ಕಾರ್ಯ ಪ್ರವೃತ್ತರಾದರು.
ಎಲ್ಲಾ ಪ್ರಯಾಣಿಕರಿಗೆ ವಿಮಾನದಿಂದ ಕೆಳಗಿಳಿಯುವಂತೆ ಹಾಗೂ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಕಾಯುವಂತೆ ತಿಳಿಸಲಾಯಿತು. ವಿಮಾನ ಯಾನ ಸಂಸ್ಥೆಯ ತಂಡ ವಿಮಾನ ಒಳಗೆ ಕಾರ್ಯಾಚರಣೆ ನಡೆಸಿತು.
‘‘ವಿಮಾನದಲ್ಲಿ ಇಲಿ ಇರುವ ಬಗ್ಗೆ ಪ್ರಯಾಣಿಕರೊಬ್ಬರು ದೂರು ನೀಡಿದರು. ಅನಂತರ ತಪಾಸಣೆ ನಡೆಸಲಾಯಿತು. ಇಲಿಯನ್ನು ಹೊರ ಹಾಕಲಾಯಿತು. ಇದರಿಂದ ವಿಮಾನ 3 ಗಂಟೆ ತಡವಾಗಿ ಹಾರಾಟ ಆರಂಭಿಸಿತು’’ ಎಂದು ಕಾನ್ಪುರ ವಿಮಾನ ನಿಲ್ದಾಣದ ನಿರ್ದೇಶಕ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಸಂಪೂರ್ಣ ತಪಾಸಣೆ ನಡೆಸಿದ ಹಾಗೂ ಸುರಕ್ಷಿತ ಎಂದು ಘೋಷಿಸಿದ ಬಳಿಕ ವಿಮಾನಕ್ಕೆ ಸಂಚರಿಸಲು ಅನುಮತಿ ನೀಡಲಾಯಿತು ಎಂದು ಅವರು ಹೇಳಿದ್ದಾರೆ.