×
Ad

8ನೇ ದಿನಕ್ಕೂ ಇಂಡಿಯಾದಲ್ಲಿ ಮುಗಿಯದ IndiGo ಬಿಕ್ಕಟ್ಟು

500 ಯಾನಗಳು ರದ್ದು,ಮಾರ್ಗಗಳನ್ನು ಕಡಿತಗೊಳಿಸಿದ ಸರಕಾರ

Update: 2025-12-09 21:24 IST

Photo Credit : PTI 

ಹೊಸದಿಲ್ಲಿ,ಡಿ.9: ಇಂಡಿಗೊ ಬಿಕ್ಕಟ್ಟು ಸತತ ಎಂಟನೇ ದಿನವಾದ ಮಂಗಳವಾರವೂ ಮುಂದುವರಿದ್ದು,ಸಂಸ್ಥೆಯು ಇಂದು ತನ್ನ ಸುಮಾರು 500 ವಿಮಾನಯಾನಗಳನ್ನು ರದ್ದುಗೊಳಿಸಿದೆ. ಇದೇ ವೇಳೆ ನಾಗರಿಕ ವಾಯುಯಾನ ಮಹಾನಿರ್ದೇಶನಾಲಯವು(DGCA) ಇಂಡಿಗೊದ ಯಾನಗಳ ಸಂಖ್ಯೆಯನ್ನು ಶೇ.5ರಷ್ಟು ಕಡಿತಗೊಳಿಸಿದೆ.

ಬೆಂಗಳೂರು ಮತ್ತು ದಿಲ್ಲಿಗಳಲ್ಲಿ ಹೆಚ್ಚಿನ ಅಡೆತಡೆಗಳುಂಟಾಗಿದ್ದು,ಬೆಂಗಳೂರಿನಲ್ಲಿ 58 ಆಗಮನಗಳು ಮತ್ತು 63 ನಿರ್ಗಮನಗಳು ಸೇರಿದಂತೆ 121 ಯಾನಗಳು ರದ್ದುಗೊಂಡಿದ್ದರೆ,ದಿಲ್ಲಿಯಿಂದ 152 ಯಾನಗಳನ್ನು ರದ್ದುಗೊಳಿಸಲಾಗಿತ್ತು.

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 14 ಆಗಮನಗಳು ಮತ್ತು 44 ನಿರ್ಗಮನಗಳು ಸೇರಿದಂತೆ 58 ವಿಮಾನಗಳು ರದ್ದಾಗಿದ್ದರೆ,ಚೆನ್ನೈನಿಂದ ಕನಿಷ್ಠ 81,ಮುಂಬೈನಿಂದ 31,ಲಕ್ನೋದಿಂದ 26 ಮತ್ತು ಅಹ್ಮದಾಬಾದ್ ನಿಂದ 16 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು.

ಪ್ರಸಕ್ತ ಬಿಕ್ಕಟ್ಟಿನಿಂದಾಗಿ ಇಂಡಿಗೊ ಸಂಸ್ಥೆ ಚಳಿಗಾಲದ ವೇಳಾಪಟ್ಟಿಯಲ್ಲಿನ ಹಲವಾರು ಮಾರ್ಗಗಳನ್ನು ಕಳೆದುಕೊಳ್ಳಬಹುದು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕೇಂದ್ರ ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು,ಸರಕಾರವು ದಂಡರೂಪದಲ್ಲಿ ಇಂಡಿಗೊದ ಸ್ಲಾಟ್ ಹಂಚಿಕೆಯನ್ನು ಖಂಡಿತವಾಗಿಯೂ ಕಡಿತಗೊಳಿಸಲಿದೆ ಎಂದು ತಿಳಿಸಿದರು.

‘ಇಂಡಿಗೊದ ಚಳಿಗಾಲದ ವೇಳಾಪಟ್ಟಿಯಿಂದ ಕೆಲವು ಮಾರ್ಗಗಳನ್ನು ಕಡಿಮೆ ಮಾಡುವಂತೆ ನಾವು ಆದೇಶ ಹೊರಡಿಸುತ್ತೇವೆ. ಇವುಗಳನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ಮರುಹಂಚಿಕೆ ಮಾಡಲಾಗುವುದು ಮತ್ತು ಇಂಡಿಗೊ ಅವುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದಾಗ ಮಾತ್ರ ಅದಕ್ಕೆ ಈ ಮಾರ್ಗಗಳನ್ನು ಮರಳಿಸಲಾಗುವುದು’ ಎಂದರು.

►ಬಿಕ್ಕಟ್ಟಿಗೆ ಇಂಡಿಗೊ ಸಂಸ್ಥೆಯೇ ಸಂಪೂರ್ಣ ಹೊಣೆ

ಹದಗೆಡುತ್ತಿರುವ ಬಿಕ್ಕಟ್ಟಿಗೆ ಸಂಪೂರ್ಣ ಹೊಣೆಯನ್ನು ಇಂಡಿಗೊದ ಮೇಲೆ ಹೊರಿಸಿದ ನಾಯ್ಡು,ಹಲವಾರು ಸಮಾಲೋಚನೆಗಳ ಬಳಿಕವೂ ಅದು ತನ್ನ ಸಿಬ್ಬಂದಿ ಮತ್ತು ನಿಯೋಜನೆ ವ್ಯವಸ್ಥೆಗಳನ್ನು ನಿರ್ವಹಿಸುವಲ್ಲಿ ವಿಫಲಗೊಂಡಿದೆ ಎಂದು ಪ್ರತಿಪಾದಿಸಿದರು.

‘ಪರಿಷ್ಕೃತ ಪೈಲಟ್ ಕರ್ತವ್ಯ ನಿಯಮಗಳ ಅನುಷ್ಠಾನದ ಸಮಯ ನಾವು ಇಂಡಿಗೊವನ್ನು ನಿರ್ಲಕ್ಷಿಸಿಲ್ಲ,ಅದಕ್ಕೆ ವಿನಾಯಿತಿಯನ್ನೂ ನೀಡಿಲ್ಲ. ಇಡೀ ಪ್ರಕ್ರಿಯೆಯಲ್ಲಿ ಇಂಡಿಗೊವನ್ನು ನಾವು ಸುಮ್ಮನೆ ಬಿಡುವುದಿಲ್ಲ .ಸಂಸ್ಥೆಯ ಪ್ರಸ್ತುತ ಬಿಕ್ಕಟ್ಟು ಅದರ ಸ್ವಂತ ಕಾರ್ಯಾಚರಣಾ ವೈಫಲ್ಯದ ಫಲಶ್ರುತಿಯಾಗಿದೆ’ ಎಂದರು.

ವಿಮಾನಯಾನಗಳ ಸರಣಿ ರದ್ದತಿಗೆ ಇಂಡಿಗೊದ ಆಡಳಿತ ವೈಫಲ್ಯಗಳೇ ಕಾರಣ ಎಂದು ದೂರಿದ ನಾಯ್ಡು,ಅದು ತನ್ನ ಆಂತರಿಕ ಸಿಬ್ಬಂದಿ ನಿಯೋಜನೆ ವ್ಯವಸ್ಥೆಯನ್ನು ಹಾಳುಗೆಡವಿದೆ. ನಿಯಮಗಳು ಜಾರಿಗೊಳ್ಳುವ ಮುನ್ನ ಎಲ್ಲ ವಾಯುಯಾನ ಸಂಸ್ಥೆಗಳು ಸಾಕಷ್ಟು ಸಿದ್ಧತಾ ಸಮಯವನ್ನು ಹೊಂದಿದ್ದವು ಮತ್ತು ಪದೇ ಪದೇ ಸಮಾಲೋಚನೆಗಳನ್ನು ನಡೆಸಿದ್ದವು ಎಂದು ಒತ್ತಿ ಹೇಳಿದರು.

►ಇಂಡಿಗೊ ವೇಳಾಪಟ್ಟಿ ಶೇ.5ರಷ್ಟು ಕಡಿತ

ನಾಯ್ಡು ಅವರ ಹೇಳಿಕೆಯ ಬೆನ್ನಲ್ಲೇ DGCA ಇಂಡಿಗೊದ ಚಳಿಗಾಲದ ವೇಳಾಪಟ್ಟಿಯನ್ನು ಶೇ.5ರಷ್ಟು ಕಡಿತಗೊಳಿಸಿ ಆದೇಶಿಸಿದೆ.

DGCA ಪ್ರಕಾರ ಕಡಿತಗೊಳಿಸಲಾದ ವೇಳಾಪಟ್ಟಿಯು ಬಹುವಲಯಗಳಿಗೆ ಅನ್ವಯವಾಗುತ್ತದೆ ಮತ್ತು ಹೆಚ್ಚಿನ ಬೇಡಿಕೆಯಿರುವ,ಹೆಚ್ಚಿನ ಆವರ್ತನದ ಮಾರ್ಗಗಳಲ್ಲಿ ಗಣನೀಯ ಕಡಿತಗಳನ್ನು ಮಾಡಲಾಗಿದೆ. ತನ್ನ ಪರಿಷ್ಕೃತ ಕಾರ್ಯಾಚರಣೆ ವೇಳಾಪಟ್ಟಿಯನ್ನು ಬುಧವಾರ ಸಂಜೆ ಐದು ಗಂಟೆಯೊಳಗೆ ಸಲ್ಲಿಸುವಂತೆ DGCA ಇಂಡಿಗೊಕ್ಕೆ ನಿರ್ದೇಶನ ನೀಡಿದೆ.

ಇಂಡಿಗೊದ 2025-26ರ ಚಳಿಗಾಲದ ವೇಳಾಪಟ್ಟಿಗಾಗಿ 15,104 ಸಾಪ್ತಾಹಿಕ ನಿರ್ಗಮನಗಳನ್ನು ಅನುಮೋದಿಸಲಾಗಿತ್ತಾದರೂ ಮಂಜೂರಾತಿಯಂತೆ ಯಾನಗಳನ್ನು ನಿರ್ವಹಿಸಲು ಅದಕ್ಕೆ ಸಾಧ್ಯವಾಗಿಲ್ಲ ಎಂದು DGCA ಬೆಟ್ಟು ಮಾಡಿದೆ. 2025ರ ಬೇಸಿಗೆ ವೇಳಾಪಟ್ಟಿಯಲ್ಲಿ 352 ವಿಮಾನಗಳನ್ನು ನಿರ್ವಹಿಸಿದ್ದ ಇಂಡಿಗೊಕ್ಕೆ ಚಳಿಗಾಲದ ವೇಳಾ ಪಟ್ಟಿಯಲ್ಲಿ ತಿಂಗಳಿಗೆ 403 ವಿಮಾನಗಳನ್ನು ಕಾರ್ಯಚರಿಸಲು ಅನುಮತಿ ನೀಡಲಾಗಿತ್ತು,ಆದರೆ ಅದು ಅಕ್ಟೋಬರ್ನಲ್ಲಿ ಕೇವಲ 339 ಮತ್ತು ನವಂಬರ್ನಲ್ಲಿ 344 ವಿಮಾನಗಳನ್ನು ಕಾರ್ಯಾಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News