ವಿಮಾನಗಳ ಹಾರಾಟ ರದ್ದತಿಯಿಂದ ಪ್ರಯಾಣಿಕರ ಪರದಾಟ: ಕ್ಷಮೆಯಾಚಿಸಿದ ಇಂಡಿಗೊ
Credit: PTI Photo
ಹೊಸದಿಲ್ಲಿ: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲಿ ಒಂದಾದ ಇಂಡಿಗೊದಲ್ಲಿ ಅವ್ಯವಸ್ಥೆ ಮುಂದುವರೆದಿದ್ದು, 550ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿದೆ. ಇದು ನೂರಾರು ಪ್ರಯಾಣಿಕರ ಪ್ರಯಾಣ ಯೋಜನೆಗಳ ಮೇಲೆ ಪರಿಣಾಮ ಬೀರಿದೆ. ಇದರ ಬೆನ್ನಲ್ಲೆ ಇಂಡಿಗೊ ವಿಮಾನಯಾನ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇಂಡಿಗೊ, ಪ್ರಯಾಣಿಕರು ಮತ್ತು ಉದ್ಯಮದ ಪಾಲುದಾರರಿಗೆ ಉಂಟಾದ ಅನಾನುಕೂಲತೆ ಬಗ್ಗೆ ನಾವು ಕ್ಷಮೆಯಾಚಿಸುತ್ತೇವೆ. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ನಮ್ಮ ತಂಡ ದಿನರಾತ್ರಿ ಶ್ರಮಿಸುತ್ತಿದೆ ಎಂದು ಹೇಳಿದೆ.
ಸಾಮಾನ್ಯ ಸ್ಥಿತಿಯನ್ನು ಮರಳಿ ತರುವ ಸಲುವಾಗಿ ನಾಗರಿಕ ವಿಮಾನಯಾನ ಸಚಿವಾಲಯ (MOCA), ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA), ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS), ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಹಾಗೂ ವಿಮಾನ ನಿಲ್ದಾಣ ಆಪರೇಟರ್‌ಗಳ ಸಹಕಾರದೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದೆ.
ಇಂಡಿಗೊ ವಿಮಾನಗಳ ವಿಳಂಬ ಮತ್ತು ರದ್ದತಿಯಿಂದಾಗಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. "ಪ್ರಯಾಣಿಕರಿಗೆ ನಾವು ನಿಗದಿತ ವಿಮಾನಗಳಲ್ಲಿನ ಬದಲಾವಣೆಗಳ ಕುರಿತು ನಿರಂತರವಾಗಿ ಮಾಹಿತಿ ನೀಡುತ್ತೇವೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು https://goindigo.in/check-flight-status.html ನಲ್ಲಿ ಇತ್ತೀಚಿನ ಸ್ಥಿತಿಯ ಬಗ್ಗೆ ಪರಿಶೀಲಿಸುವಂತೆ ಸಲಹೆ ನೀಡುತ್ತೇವೆ. ಅವ್ಯವಸ್ಥೆಯಿಂದ ಉಂಟಾದ ಅನಾನುಕೂಲತೆಗೆ ಇಂಡಿಗೊ ತೀವ್ರವಾಗಿ ವಿಷಾದಿಸುತ್ತದೆ ಮತ್ತು ಸಾಧ್ಯವಾದಷ್ಟು ಸುಗಮ ಕಾರ್ಯಾಚರಣೆಯನ್ನು ನಡೆಸುವತ್ತ ಪ್ರಯತ್ನ ಮುಂದುವರಿಸಿದೆ" ಎಂದು ಹೇಳಿದೆ.
ಡಿಜಿಸಿಎ (DGCA) ಮಾಹಿತಿ ಪ್ರಕಾರ, ಇಂಡಿಗೊ ವಿಮಾನಯಾನ ಸಂಸ್ಥೆಯು ತನ್ನ A320 ವಿಮಾನಗಳ ಕಾರ್ಯಾಚರಣೆಗೆ ಸಂಬಂಧಿಸಿದ ನಿರ್ದಿಷ್ಟ ಎಫ್‌ಡಿಟಿಎಲ್ ನಿಯಮಗಳಿಂದ ಫೆಬ್ರವರಿ 10, 2026ರವರೆಗೆ ವಿನಾಯಿತಿ ಕೋರಿದೆ ಎಂದು ವರದಿಯಾಗಿದೆ.