ಮೊಝಾಂಬಿಕ್ ನ ಗ್ರಾಸಾ ಮಾಶೆಲ್ ಗೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ
ಗ್ರಾಸಾ ಮಾಶೆಲ್ | Photo Credit : X \ AdvoBarryRoux
ಹೊಸದಿಲ್ಲಿ, ಜ. 21: ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ನೀಡಲಾಗುವ 2025ರ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿಗೆ ಮೊಝಾಂಬಿಕ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ ಗ್ರಾಸಾ ಮಾಶೆಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿಯ ಅಂತಾರಾಷ್ಟ್ರೀಯ ತೀರ್ಪುಗಾರರ ಮಂಡಳಿ ಬುಧವಾರ ಘೋಷಿಸಿದೆ.
ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ, ಆರ್ಥಿಕ ಸಬಲೀಕರಣ ಕ್ಷೇತ್ರಗಳಲ್ಲಿ ಅವರು ಮಾಡಿರುವ ಗಣನೀಯ ಕೆಲಸಗಳು ಹಾಗೂ ಕಠಿಣ ಪರಿಸ್ಥಿತಿಗಳಲ್ಲಿಯೂ ನಡೆಸಿದ ಮಾನವೀಯ ಕಾರ್ಯಗಳಿಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅಧ್ಯಕ್ಷತೆಯಲ್ಲಿರುವ ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಮಾಶೆಲ್ ಅವರು ಆಫ್ರಿಕದ ಉನ್ನತ ರಾಜತಾಂತ್ರಿಕೆ, ರಾಜಕಾರಣಿ ಮತ್ತು ಮಾನವತಾವಾದಿಯಾಗಿದ್ದಾರೆ. ಸ್ವಯಮಾಡಳಿತ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಅವರು ಜೀವಮಾನಪೂರ್ಣ ಹೋರಾಟ ನಡೆಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
‘‘ಅವರು ಸರ್ವರಿಗೂ ನ್ಯಾಯೋಚಿತ ಹಾಗೂ ಸಮಾನತೆಯ ಸಮಾಜವೊಂದನ್ನು ರೂಪಿಸಲು ಶ್ರಮಿಸಿದ್ದಾರೆ. ಅದರ ಮೂಲಕ ದುರ್ಬಲ ಸಮುದಾಯಗಳ ಜನರ ಜೀವನವನ್ನು ಸುಧಾರಿಸಲು ಪ್ರಯತ್ನಿಸಿದ್ದಾರೆ. ಈ ಕಾರ್ಯಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ’’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.